ADVERTISEMENT

ಯುವತಿಯರ ಅಂಗಾಂಗ ಚಿತ್ರೀಕರಿಸಿ ಬೆದರಿಕೆ

ಉದ್ಯೋಗ ಆಮಿಷವೊಡ್ಡಿ ಕೃತ್ಯ ಎಸಗುತ್ತಿದ್ದ ತಿರುವನಂತಪುರದ ಹೋಟೆಲ್ ವ್ಯವಸ್ಥಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 19:56 IST
Last Updated 28 ಮಾರ್ಚ್ 2018, 19:56 IST
ದೀಪುರಾಜ್‌
ದೀಪುರಾಜ್‌   

ಬೆಂಗಳೂರು: ವಿಡಿಯೊ ಕರೆ ಮೂಲಕ ಯುವತಿಯರನ್ನು ಸಂಪರ್ಕಿಸಿ, ಅವರ ಅಂಗಾಂಗಗಳ ಚಿತ್ರೀಕರಣ ಮಾಡಿಕೊಂಡು ಬೆದರಿಕೆವೊಡ್ಡುತ್ತಿದ್ದ ಆರೋಪದಡಿ ದೀಪುರಾಜ್‌ನನ್ನು (36) ಸಿಸಿಬಿ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರದ ‘ಆರೋಮ್ ಕ್ಲಾಸಿಕ್‌ಡೇಸ್’ ಹೋಟೆಲ್‌ ವ್ಯವಸ್ಥಾಪಕನಾಗಿದ್ದ ಆರೋಪಿಯು ಡಾ. ಹರಿಕೃಷ್ಣನ್, ರಾಜೇಶ್ ಪನಿಕರ್, ರಾಕೇಶ್‌ ಶರ್ಮಾ, ರಾಕೇಶ್ ನಾಯರ್ ಹೆಸರುಗಳಿಂದ ಯುವತಿಯರ ಪರಿಚಯ ಮಾಡಿಕೊಂಡು ಉದ್ಯೋಗ ಕೊಡಿಸುವ ನೆಪದಲ್ಲಿ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದರು.

‘ನೌಕರಿ ಡಾಟ್ ಕಾಮ್‌‘ ಹಾಗೂ ‘ಲಿಂಕ್ಡ್‌ ಇನ್‌ ಡಾಟ್ ಕಾಮ್‘ ಜಾಲತಾಣಗಳಲ್ಲಿ ದೇಶದ ವಿವಿಧ ರಾಜ್ಯಗಳ ಯುವತಿಯರು ಅಪ್‌ಲೋಡ್‌ ಮಾಡುತ್ತಿದ್ದ ರೆಸ್ಯುಮೆಗಳ ಮಾಹಿತಿಯನ್ನು ಆರೋಪಿ ಪಡೆಯುತ್ತಿದ್ದ. ಅದರಲ್ಲಿದ್ದ ಮೊಬೈಲ್‌ ನಂಬರ್‌ ಮೂಲಕ ಯುವತಿಯರನ್ನು ಸಂಪರ್ಕಿಸುತ್ತಿದ್ದ. ‘ಎಮಿರೆಟ್ಸ್‌ ಏರ್‌ಲೈನ್ಸ್‌’ನಲ್ಲಿ ‘ಗ್ರಾಹಕಸ್ನೇಹಿ ವ್ಯವಸ್ಥಾಪಕ’ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದ.

ADVERTISEMENT

‘ಹುದ್ದೆಗೆ ಆಯ್ಕೆ ಮಾಡಲು ದೈಹಿಕ, ವೈದ್ಯಕೀಯ ದೃಢತೆ ಸೇರಿದಂತೆ ಐದು ಸುತ್ತಿನ ಸಂದರ್ಶನ ಇರುವುದಾಗಿ ಹೇಳುತ್ತಿದ್ದ. ಈ ಎರಡೂ ಸಂದರ್ಶನ ಮಾಡಲು ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕರೆ ಮಾಡುವಂತೆ ತಿಳಿಸುತ್ತಿದ್ದ. ಅದನ್ನು ನಂಬಿ ಯವತಿಯರು, ವಿಡಿಯೊ ಕರೆ ಮಾಡಿ ಸಂದರ್ಶನ ಕೊಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ಅಂಗಾಂಗಗಳನ್ನು ತೋರಿಸುವಂತೆ ಸಂದರ್ಶನ ವೇಳೆಯೇ ಯುವತಿಯರಿಗೆ ಹೇಳುತ್ತಿದ್ದ ಆರೋಪಿ, ಅದನ್ನು ಚಿತ್ರೀಕರಣ ಮಾಡಿಟ್ಟುಕೊಳ್ಳುತ್ತಿದ್ದ. ನಂತರ, ಮೊಬೈಲ್‌ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ‘ನನ್ನ ಬಳಿ ವಿಡಿಯೊ ಇದೆ. ನಾನು ಹೇಳಿದಂತೆ ಕೇಳದಿದ್ದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತೇನೆ’ ಎಂದು ಆತ ಬೆದರಿಕೆ ಹಾಕುತ್ತಿದ್ದ. ಕೆಲವರಿಂದ ಹಣವನ್ನೂ ವಸೂಲಿ ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಅವರು ವಿವರಿಸಿದರು.

ಸ್ಥಳೀಯ ಯುವತಿಗೆ ಬೆದರಿಕೆ: ಬೆಂಗಳೂರಿನ ನಿವಾಸಿಯಾದ ಯುವತಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿ, ಡಾ. ರಾಕೇಶ್ ನಾಯರ್ ಹೆಸರಿನಿಂದ ಪರಿಚಯ ಮಾಡಿಕೊಂಡಿದ್ದ. ನಂತರ, ಸಂದರ್ಶನ ನೆಪದಲ್ಲಿ ಅವರ ವಿಡಿಯೊ ಚಿತ್ರೀಕರಿಸಿಕೊಂಡಿದ್ದ. ಅದನ್ನು ತೋರಿಸಿ ಬೆದರಿಕೆ ಒಡ್ಡಿದ್ದ. ನೊಂದ ಯುವತಿ, ಸೈಬರ್‌ ಠಾಣೆಗೆ ದೂರು ನೀಡಿದ್ದರು.

‘ದೂರು ಪರಿಶೀಲಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದೆವು. ಮೊಬೈಲ್‌ ಸಂಖ್ಯೆ ಜಾಡು ಹಿಡಿದು ಹೋದಾಗ ಆತ ಸಿಕ್ಕಿಬಿದ್ದ. ಮೊಬೈಲ್ ಹಾಗೂ ಪೆನ್‌ಡ್ರೈವ್‌ ಜಪ್ತಿ ಮಾಡಿದ್ದೇವೆ. ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೊರ ರಾಜ್ಯಗಳ ಯುವತಿಯರಿಗೂ ಆತ ಬೆದರಿಕೆವೊಡ್ಡಿದ್ದು ಗೊತ್ತಾಗಿದೆ. ಅಂಥ ಯುವತಿಯರನ್ನು ಸಂಪರ್ಕಿಸಿ ಹೇಳಿಕೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.