ADVERTISEMENT

ಯುವತಿ ಹಲ್ಲೆ ಪ್ರಕರಣ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 20:22 IST
Last Updated 24 ಏಪ್ರಿಲ್ 2013, 20:22 IST

ರಾಮನಗರ: ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಹೇರೋಹಳ್ಳಿಯ ನಿರ್ಜನ ಪ್ರದೇಶದಲ್ಲಿ ಫೆಬ್ರುವರಿ 3ರ ರಾತ್ರಿ ನಡೆದಿದ್ದ ಯುವತಿ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಕುರಿತು ಬರೋಬ್ಬರಿ ಎರಡು ತಿಂಗಳು ಇಪ್ಪತ್ತು ದಿನ ತನಿಖೆ ನಡೆಸಿದ ರಾಮನಗರ ಜಿಲ್ಲಾ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಯಶವಂತಪುರದ ತಿಗಳಪಾಳ್ಯದಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ದೊರೆ ಉರುಫ್ ಕಪ್ಪಲ್ ದೊರೆ (35) ಆರೋಪಿಯಾಗಿದ್ದು, ಈತ ಮೂಲತಃ ತಮಿಳುನಾಡಿನ ರಾಜ್ಯದ ವೆಳ್ಳಿಪುರಂ ಜಿಲ್ಲೆ ಕರ್ನಾಪುರಂ ಊರಿನವನಾಗಿದ್ದಾನೆ.

ಆರೋಪಿ ಸುಮಾರು 8ರಿಂದ 9 ಗಂಟೆ ಸಮಯದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ಅನೈತಿಕ ವ್ಯವಹಾರ ನಡೆಸುವ ಹೆಂಗಸರನ್ನು ಹಣ ನೀಡುವ ಆಮಿಷ ತೋರಿಸಿ ನಿರ್ಜನ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಅವರ ಜತೆ ಲೈಂಗಿಕ ಸಂಪರ್ಕ ನಡೆಸಿ, ನಂತರ ಅವರ ಬಳಿಯ ವಸ್ತುಗಳನ್ನು ದೋಚುತ್ತಿದ್ದ. ಹೀಗೆ ಈತ ನಾಲ್ಕರಿಂದ ಐದು ಹೆಂಗಸರಿಗೆ ವಂಚಿಸಿದ್ದಾನೆ. ಆದರೆ ಈ ಕುರಿತು ಯಾವುದೇ ದೂರು ದಾಖಲಾಗಿರಲಿಲ್ಲ ಎಂದು ಎಸ್‌ಪಿ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ರೀತಿ ಈ ಆರೋಪಿ ಫೆ.3ರಂದು ರಾತ್ರಿ ಈ ಯುವತಿಯನ್ನು ಸಾವಿರ ರೂಪಾಯಿ ಹಣ ಕೊಡುವುದಾಗಿ ನಂಬಿಸಿ ಹೇರೋಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆ ಮೊದಲು ಹಣ ಕೊಡುವಂತೆ ಒತ್ತಾಯ ಮಾಡಿದ್ದಾಳೆ. ಆದರೆ ಈತ ಲೈಂಗಿಕ ಕ್ರಿಯೆಗೆ ಬಲವಂತ ಪಡಿಸಿದ್ದಾನೆ. ನಿರಾಕರಿಸಿದ ಆಕೆ ಅತ್ಯಾಚಾರದ ಕೇಸು ನೀಡುವುದಾಗಿ ಹೆದರಿಸಿದ್ದಾಳೆ. ಕೋಪಗೊಂಡ ಈತ ಆಕೆಯನ್ನು ಸಾಯಿಸಲು ಕಲ್ಲು ಮತ್ತು ರಾಡುಗಳಿಂದ ಹೊಡೆದು ಹೊರಟು ಹೋಗಿದ್ದಾನೆ ಎಂದು ಘಟನೆ ಕುರಿತು ವಿವರಿಸಿದರು.

ಈ ಹಲ್ಲೆ ಪ್ರಕರಣದಲ್ಲಿ ತೀವ್ರಗಾಯಗೊಂಡಿದ್ದ ಯುವತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ದೊರೆತ ಕಾರಣ ಯುವತಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಅವರು ತಿಳಿಸಿದರು.

ಇಲ್ಲಿಯವರೆಗಿನ ತನಿಖೆಯಿಂದ ಗಾಯಾಳುವಿನ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ತಿಳಿದು ಬಂದಿರುವುದಾಗಿ ಎಸ್.ಪಿ ತಿಳಿಸಿದರು. ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಿದ್ದರಿಂದ ಆಕೆ ಗುರುತು, ಸಂಬಂಧಿಕರು ಮತ್ತು ಆರೋಪಿಯನ್ನು ಪತ್ತೆ ಹಚ್ಚಲು ಇಷ್ಟು ಸಮಯ ಬೇಕಾಯಿತು ಎಂದು  ಪ್ರತಿಕ್ರಿಯಿಸಿದರು.

ಯುವತಿ ಗುರುತು, ಆರೋಪಿಗಳ ಪತ್ತೆಗೆ ಡಿಎಸ್‌ಪಿ ಎನ್.ಎಂ.ರಾಮಲಿಂಗಪ್ಪ ಅವರನ್ನು ತನಿಖಾಧಿಕಾರಿಯಾಗಿಸಿ ಆರು ವಿಶೇಷ ತಂಡಗಳನ್ನು ರಚಿಸಿ ಪತ್ತೆ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ತನಿಖೆ ನಂತರ ಗಾಯಾಳು ದಾವಣಗೆರೆ ಮೂಲದ ಬೆಂಗಳೂರು ವಾಸಿ ಎಂದು ಗೊತ್ತಾಯಿತು. ಆಕೆಯ ತಾಯಿ, ತಂಗಿ ಮತ್ತು ಇತರೆ ಸಂಬಂಧಿಕರು ಗಾಯಾಳುವನ್ನು ಗುರುತು ಹಿಡಿದರು ಎಂದು ಎಸ್.ಪಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.