ADVERTISEMENT

ಯುವಮ್ಯಾನೇಜ್‌ಮೆಂಟ್ ವೃತ್ತಿಪರರ ಅಗತ್ಯ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST
ಯುವಮ್ಯಾನೇಜ್‌ಮೆಂಟ್ ವೃತ್ತಿಪರರ ಅಗತ್ಯ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ
ಯುವಮ್ಯಾನೇಜ್‌ಮೆಂಟ್ ವೃತ್ತಿಪರರ ಅಗತ್ಯ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ   

ಬೆಂಗಳೂರು: `ಭ್ರಷ್ಟಾಚಾರಮುಕ್ತ ಹಾಗೂ ದಕ್ಷ ಆಡಳಿತಕ್ಕೆ ಪೂರಕವಾದ ಪರಿಣಾಮಕಾರಿ ಹೊಸ ಚಿಂತನೆ ಹೊಂದಿರುವ ಯುವ ಮ್ಯಾನೇಜ್‌ಮೆಂಟ್ ವೃತ್ತಿಪರರ ಅಗತ್ಯವಿದೆ~ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದರು.

ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಭಾರತೀಯ ಮ್ಯಾನೇಜ್‌ಮೆಂಟ್ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ಆರಂಭಿಸಿರುವ `ಪ್ರಯಾಸ್~ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

`ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸುಧಾರಿತ ಕ್ರಮ, ಆಹಾರ ಪದಾರ್ಥ ಉತ್ಪಾದನೆ ಹೆಚ್ಚಿಸುವ ವಿಧಾನ... ಹೀಗೆ ಹೊಸ ಯೋಜನೆಗಳನ್ನು, ಪರಿಕಲ್ಪನೆಗಳನ್ನು ಜಾರಿಗೊಳಿಸಲು ವಿದ್ಯಾರ್ಥಿಗಳು ಚಿಂತಿಸಬೇಕು~ ಎಂದು ಕಿವಿಮಾತು ಹೇಳಿದರು.

`ಗ್ರಾಮೀಣ ಪ್ರದೇಶದ ಅಭಿವೃದ್ಧಿ ಹಾಗೂ ಗ್ರಾಮೀಣ ಜನರ ಕಲ್ಯಾಣಕ್ಕೆ ಪೂರಕವಾದ ಪ್ರಗತಿಪರ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ಗ್ರಾಮಸ್ಥರು ಹಳ್ಳಿಗಳಲ್ಲೇ ನೆಲೆಸಿ ಅಲ್ಲಿಯೇ ಸುಖಕರ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಾದ ವಾತಾವರಣ ಕಲ್ಪಿಸಲು ಬಗ್ಗೆ ಯೋಚಿಸಬೇಕು~ ಎಂದರು.

`ಇಂದಿನ ಪರಿಸ್ಥಿತಿಯಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ವ್ಯವಹಾರ ನಡೆಸುವ ಉದ್ಯಮಿಗಳ ಅಗತ್ಯವಿದೆ. ಹಾಗೆಯೇ ದೇಶದಲ್ಲಿ ಬಡವರು ಹಾಗೂ ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ~ ಎಂದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಅಬ್ದುಲ್ ಕಲಾಂ ಅವರು ಪೆರುಮಾಳ್ ಎಂಬುವರಿಗೆ ಕೃತಕ ಕಾಲು ಜೋಡಿಸುವ ಮೂಲಕ ಶಿಬಿರಕ್ಕೆ ಸಾಂಕೇತಿವಾಗಿ ಚಾಲನೆ ನೀಡಿದರು.

ಐಐಎಂಬಿ ನಿರ್ದೇಶಕ ಪ್ರೊ. ಪಂಕಜ್ ಚಂದ್ರ, ಎಕ್ಸಿಕ್ಯೂಟಿವ್ ಪೋಸ್ಟ್ ಗ್ರಾಜುಯೇಟ್ (ಇಪಿಜಿಪಿ) ಕಾರ್ಯಕ್ರಮದ ಮುಖ್ಯಸ್ಥ ಪ್ರೊ.ಎಲ್. ಪ್ರಸಾದ್ ಉಪಸ್ಥಿತರಿದ್ದರು.

`ಪ್ರಯಾಸ್~ ಕಾರ್ಯಕ್ರಮ: ಐಐಎಂಬಿ ಸಂಸ್ಥೆಯ ಎಕ್ಸಿಕ್ಯೂಟಿವ್ ಪೋಸ್ಟ್ ಗ್ರಾಜುಯೇಟ್ ಪ್ರೋಗ್ರಾಮ್ (ಇಪಿಜಿಪಿ) ಕೋರ್ಸ್‌ನ ವಿದ್ಯಾರ್ಥಿಗಳು `ಪ್ರಯಾಸ್~ ಹೆಸರಿನ ಸಮಾಜ ಸೇವಾ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಅಗತ್ಯ ನೆರವು ನೀಡುವುದು ಈ ಕಾರ್ಯಕ್ರಮದ ಉದ್ದೇಶ.

ಈ ಬಾರಿಯ ಶಿಬಿರದಲ್ಲಿ ಜೈಪುರ ಕೃತಕ ಕಾಲು ಅಳವಡಿಕೆ ಜತೆಗೆ, ಸೀಳು ತುಟಿ ಮತ್ತು ಮುಖದ ಇತರೆ ವಿರೂಪಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ನೀಡಲಿದೆ. ಹಾಗೆಯೇ ಕಣ್ಣಿನ ಪೊರೆ, ಗ್ಲುಕೋಮಾ, ದೃಷ್ಟಿ ದೋಷ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೇತ್ರ ತಪಾಸಣೆ ಕೂಡ ನಡೆಯಲಿದೆ. ಶಿಬಿರವು ಇದೇ 23ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ: 080- 26993759.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.