ADVERTISEMENT

ಯೂಟ್ಯೂಬ್ ನೋಡಿ ಬೈಕ್ಗಳನ್ನು ಕದಿಯುತ್ತಿದ್ದರು!

ಬಂಧಿತರಲ್ಲಿ ಮೂವರು ವಿದ್ಯಾರ್ಥಿಗಳು * ದುಬಾರಿ ಬೆಲೆಯ 28 ಬೈಕ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 20:21 IST
Last Updated 1 ಜುಲೈ 2017, 20:21 IST
ಆರೋಪಿಗಳಿಂದ ಜಪ್ತಿ ಮಾಡಲಾದ ಬೈಕ್‌ಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ಬೈಕ್‌ಗಳು   

ಬೆಂಗಳೂರು: ನಗರದ ಆಗ್ನೇಯ ವಿಭಾಗದಲ್ಲೇ ನಿರಂತರವಾಗಿ ಐಷಾರಾಮಿ ಬೈಕ್‌ಗಳನ್ನು ಕದ್ದು ತಮಿಳುನಾಡಿಗೆ ಸಾಗಿಸುತ್ತಿದ್ದ ‘ಬೆಳಗಿನ ಜಾವದ ಕಳ್ಳರ’ನ್ನು ಪರಪ್ಪನ ಅಗ್ರಹಾರ ಪೊಲೀಸರು  ಚಿಂದಿ ಆಯುವವರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

‘ತಮಿಳುನಾಡಿನ ಪ್ರಭು(21), ದೊಡ್ಡನಾಗಮಂಗಲದ ಬಿ.ಕಾಂ ವಿದ್ಯಾರ್ಥಿಗಳಾದ ಅರುಣ್ ಸಾಯಿ(21), ಕಾರ್ತಿಕ್ (18) ಹಾಗೂ 17 ವರ್ಷದ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದೇವೆ. ಆರೋಪಿಗಳಿಂದ ₹ 30 ಲಕ್ಷ ಮೌಲ್ಯದ 28 ಬೈಕ್‌ಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ತಿಳಿಸಿದರು.

ಯೂಟ್ಯೂಬ್‌ ನೋಡಿ ಸಂಚು!: ಹೊರದೇಶಗಳಲ್ಲಿ ಕಳ್ಳರು ಯಾವ ರೀತಿ ವಾಹನಗಳನ್ನು ಕದಿಯುತ್ತಾರೆ ಹಾಗೂ ಅವುಗಳನ್ನು ಹೇಗೆ ಮಾರಾಟ ಮಾಡುತ್ತಾರೆ ಎಂಬುದನ್ನು ಯೂಟ್ಯೂಬ್‌ನಲ್ಲಿ ನೋಡಿ ಕಳವು ತಂತ್ರ ರೂಪಿಸಿರುವುದು ಈ ಚಾಲಾಕಿಗಳ ವಿಶೇಷ.

ADVERTISEMENT

ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಪ್ರಭು, ಆಡುಗೋಡಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡು ದೊಡ್ಡನಾಗಮಂಗಲದಲ್ಲಿ ವಾಸವಾಗಿದ್ದ. ಇತರೆ ಮೂವರು ಆರೋಪಿಗಳೂ ಅದೇ ಪ್ರದೇಶದಲ್ಲಿ ನೆಲೆಸಿದ್ದರು.

ಕೆಲವೇ ದಿನಗಳಲ್ಲಿ ಪರಸ್ಪರರ ನಡುವೆ ಸ್ನೇಹ ಬೆಳೆದಿತ್ತು. ನಂತರ ಗೆಳೆಯರ ಬೈಕ್‌ಗಳಲ್ಲೇ ವ್ಹೀಲಿಂಗ್ ಹಾಗೂ ಡ್ರ್ಯಾಗ್‌ರೇಸ್ ಮಾಡುವುದನ್ನು ಕಲಿತು, ರಾತ್ರಿ ಸಮಯದಲ್ಲಿ ಮೋಜಿನ ಸುತ್ತಾಟಕ್ಕೆ ಹೋಗುತ್ತಿದ್ದರು.

ಈ ರೀತಿಯಾಗಿ ವಿಲಾಸಿ ಜೀವನಕ್ಕೆ ಮಾರು ಹೋದ ಆರೋಪಿಗಳಲ್ಲಿ ಐಷಾರಾಮಿ ಬೈಕ್‌ಗಳ ಮೇಲೆ ಆಸೆ ಹುಟ್ಟಿತ್ತು. ಆದರೆ, ಪೋಷಕರು ಕೂಲಿ ಕೆಲಸ ಮಾಡುತ್ತಿದ್ದರಿಂದ ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವುದು ಸುಲಭವಲ್ಲ ಎಂಬುದೂ ಅವರಿಗೆ ಗೊತ್ತಿತ್ತು. ಹೀಗಾಗಿ, ಅಡ್ಡದಾರಿ ತುಳಿದ ಆರೋಪಿಗಳು, ಯೂಟ್ಯೂಬ್‌ನಲ್ಲಿ ಸಿಕ್ಕ ವಿಡಿಯೊಗಳಿಂದ ವಾಹನ ಕಳವು ಮಾಡುವ ವಿಧಾನಗಳನ್ನು ತಿಳಿದುಕೊಂಡು ಕೃತ್ಯ ಪ್ರಾರಂಭಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ಜನ ತಡವಾಗಿ ಎದ್ದೇಳ್ತಾರೆ’: ‘ಕೋರಮಂಗಲ, ಎಲೆಕ್ಟ್ರಾನಿಕ್‌ಸಿಟಿ, ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್ ಹಾಗೂ ಪರಪ್ಪನ ಅಗ್ರಹಾರ ಸುತ್ತಮುತ್ತಲ ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳೇ ಹೆಚ್ಚಿದ್ದಾರೆ. ಸಾಮಾನ್ಯವಾಗಿ ಅವರೆಲ್ಲ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ನಿಧಾನ
ವಾಗಿ ಎದ್ದೇಳುತ್ತಾರೆ. ಹೀಗಾಗಿ, ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಬೆಳಗಿನ ಜಾವ 3 ರಿಂದ 6 ಗಂಟೆ ನಡುವೆ ಬೈಕ್ ಕಳ್ಳತನ ಮಾಡುತ್ತಿದ್ದೆವು’
ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದರು.

‘ನಾಲ್ಕೂ ಜನ ಬೇರೆ ಬೇರೆ ರಸ್ತೆಗಳಿಗೆ ಹೋಗುತ್ತಿದ್ದೆವು. ಬೈಕ್‌ನ ಹ್ಯಾಂಡಲ್ ಲಾಕ್ ಮುರಿದು, ಅದರ ಇಗ್ನೇಷನ್ ವೈರ್ ಕತ್ತರಿಸುತ್ತಿದ್ದೆವು. ನಂತರ ವೈರ್ ಡೈರೆಕ್ಟ್ ಮಾಡಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದೆವು. ವಾರಕ್ಕೆ ಒಮ್ಮೆ ಮಾತ್ರ ಕಳವು ಕಾರ್ಯಾಚರಣೆ ನಡೆಸುತ್ತಿದ್ದೆವು. ಆರು ತಿಂಗಳಿನಲ್ಲಿ 50ಕ್ಕೂ ಹೆಚ್ಚು ಬೈಕ್‌ಗಳನ್ನು ಕದ್ದು ಮಾರಿದ್ದೇವೆ’ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ.

₹ 10 ಸಾವಿರಕ್ಕೆ ಬುಲೆಟ್ ಮಾರಾಟ!: ಕದ್ದ ಬೈಕ್‌ಗಳಲ್ಲೇ ತಮಿಳುನಾಡಿಗೆ ಹೋಗುತ್ತಿದ್ದ ಆರೋಪಿಗಳು, ಅವುಗಳನ್ನು ವೇಲೂರು ಹಾಗೂ ಅಂಬೂರಿನಲ್ಲಿರುವ ಪರಿಚಿತ ವಾಹನ ಡೀಲರ್‌ಗಳಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದರು.

‘ಇವೆಲ್ಲ ಬೆಂಗಳೂರಿನಲ್ಲಿ ಫೈನಾನ್ಸ್‌ನವರು ಜಪ್ತಿ ಮಾಡಿರುವ ವಾಹನಗಳು. ಸದ್ಯ ಮುಂಗಡವಾಗಿ ಒಂದೊಂದು ಬೈಕ್‌ಗೆ ₹ 10 ಸಾವಿರದಂತೆ ಕೊಡಿ. ಸಂಬಂಧಿಸಿದ ದಾಖಲೆಗಳನ್ನು ತಂದು ಕೊಟ್ಟು, ಉಳಿದ ಹಣ ಪಡೆದುಕೊಳ್ಳುತ್ತೇವೆ’ ಎಂದು ನಂಬಿಸಿ ಮಾರಾಟ ಮಾಡಿದ್ದರು.

₹ 1.5 ಲಕ್ಷ ಮೌಲ್ಯದ ಬುಲೆಟ್ ಬೈಕನ್ನೂ ಕೇವಲ ₹ 10 ಸಾವಿರಕ್ಕೆ ಕೊಟ್ಟಿದ್ದರು. ಹೀಗೆ ಗಳಿಸಿದ ಹಣದಲ್ಲಿ ಕೇರಳ, ಪುದುಚೇರಿ, ಮೈಸೂರು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ಮೋಜು ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಚಿಂದಿ ಆಯ್ದ ಪೊಲೀಸರು!

ಆಗ್ನೇಯ ವಿಭಾಗದ ಕೆಲ ಪ್ರದೇಶಗಳಲ್ಲಿ ನಿರಂತರವಾಗಿ ಬೈಕ್‌ಗಳು ಕಳವಾಗುತ್ತಿದ್ದರಿಂದ ಆರೋಪಿಗಳ ಪತ್ತೆಗೆ 24 ಸಿಬ್ಬಂದಿಯನ್ನು ಒಳಗೊಂಡ 3 ವಿಶೇಷ ತಂಡಗಳನ್ನು ರಚಿಸಲಾಗಿತ್ತು.

‘ಕಳ್ಳತನ ನಡೆದ ಸ್ಥಳಗಳ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದರೂ ಸ್ಪಷ್ಟ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ, ನಿರ್ದಿಷ್ಟವಾಗಿ ಯಾವ್ಯಾವ ರಸ್ತೆಗಳಲ್ಲಿ ಹಾಗೂ ಯಾವ ಸಮಯದಲ್ಲಿ ಬೈಕ್‌ಗಳು ಕಳವಾಗಿವೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದೆವು. ಆಗ ಎಲ್ಲ ಕೃತ್ಯಗಳೂ ಬೆಳಗಿನ ಜಾವ 3 ರಿಂದ 6 ಗಂಟೆ ನಡುವೆಯೇ ನಡೆದಿರುವುದು ಗೊತ್ತಾಯಿತು’ ಎಂದು ತನಿಖಾಧಿಕಾರಿಗಳು ಕಾರ್ಯಾಚರಣೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಬೈಕ್ ಕಳವಾಗುತ್ತಿರುವ ರಸ್ತೆಗಳ ನಕ್ಷೆ ರಚಿಸಿಕೊಂಡು, ಪ್ರತಿ ಬೆಳಗಿನ ಜಾವ ಆ ರಸ್ತೆಗಳಲ್ಲಿ ಚಿಂದಿ ಆಯುವವರ ಸೋಗಿನಲ್ಲಿ ಸುತ್ತಾಡುತ್ತಿದ್ದೆವು. ಜುಲೈ 25ರ ಬೆಳಿಗ್ಗೆ 5 ಗಂಟೆಗೆ ಬಿಟಿಎಂ ಲೇಔಟ್‌ನಲ್ಲಿ ಬೈಕ್ ಕಳವಿಗೆ ಯತ್ನಿಸುತ್ತಿದ್ದ ಅರುಣ್ ಸಾಯಿ ಸಿಕ್ಕಿಬಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಹಚರರ ಹೆಸರುಗಳನ್ನು ಬಾಯ್ಬಿಟ್ಟ. ನಂತರ ಎಲ್ಲರನ್ನೂ ವಶಕ್ಕೆ ಪಡೆದು, ಬೈಕ್‌ಗಳನ್ನು ಜಪ್ತಿ ಮಾಡಿದೆವು’ ಎಂದು ಮಾಹಿತಿ ನೀಡಿದರು.

* ಕದ್ದ ಬೈಕ್‌ಗಳಲ್ಲಿ ತಮಿಳುನಾಡು ಕಡೆಗೆ ಹೋಗುತ್ತಿದ್ದ ದೃಶ್ಯ ಅತ್ತಿಬೆಲೆ ಟೋಲ್‌ಗೇಟ್‌ನ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆದರೆ,  ಚಹರೆ ಗೊತ್ತಾಗಿರಲಿಲ್ಲ.

-ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.