ADVERTISEMENT

ರಂಜಾನ್‌ಗೆ ಕಾಂಗ್ರೆಸ್‌ನಿಂದ ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2011, 19:30 IST
Last Updated 30 ಆಗಸ್ಟ್ 2011, 19:30 IST
ರಂಜಾನ್‌ಗೆ ಕಾಂಗ್ರೆಸ್‌ನಿಂದ ಸಾಮಗ್ರಿ ವಿತರಣೆ
ರಂಜಾನ್‌ಗೆ ಕಾಂಗ್ರೆಸ್‌ನಿಂದ ಸಾಮಗ್ರಿ ವಿತರಣೆ   

ಬೆಂಗಳೂರು: `ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ಪರಂಪರೆಯವರು ಇಂದು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಜನತೆ ಎಚ್ಚರ ವಹಿಸಬೇಕು~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಘಟಕವು ಯಾರಬ್ ನಗರದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ  ಆಹಾರ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

`ದೇಶದಲ್ಲಿ ಹಿಂದು -ಮುಸ್ಲೀಮರು ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸುವಂತೆ ಪ್ರೇರೇಪಿಸಿದ ಮಹಾನ್ ವ್ಯಕ್ತಿ ಗಾಂಧೀಜಿ. ಆದರೆ, ಈ ಮಹಾತ್ಮನನ್ನು ಆರ್‌ಎಸ್‌ಎಸ್ ಹಿನ್ನೆಲೆಯ ಗೋಡ್ಸೆ ಹತ್ಯೆ ಮಾಡಿದ. ಗಾಂಧೀಜಿ ಬದುಕಿದ್ದರೆ ಸರ್ವಧರ್ಮ ಸಹಿಷ್ಣು ಸಮಾಜ ನಿರ್ಮಾಣಗೊಳ್ಳುತ್ತಿತ್ತು~ ಎಂದು ಹೇಳಿದರು.

`ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಆ ಪಕ್ಷವು ಇಂದು ಅಧಿಕಾರದಲ್ಲಿರುತ್ತಿರಲಿಲ್ಲ. ಅನುಕಂಪದ ಮೇಲೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಕಟಕಟೆ ಏರಬೇಕಾಯಿತು. ಇಂಥವರಿಂದ ಎಂತಹ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿದೆ~ ಎಂದು ಪ್ರಶ್ನಿಸಿದರು.

`ಸಚಿವ ಆರ್.ಅಶೋಕ ವಿರುದ್ಧವೂ ಭೂ ಕಬಳಿಕೆ ಆರೋಪವಿದೆ. ಕಾನೂನು ಬಾಹಿರವಾಗಿ ಭೂಮಿ ಪಡೆದಿದ್ದರೂ ಹೆಸರು ಬಹಿರಂಗಗೊಳ್ಳದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು~ ಎಂದು ಹೇಳಿದರು.

`ಅಶೋಕ ಸೇರಿದಂತೆ ಹಿಂದಿನ ಮತ್ತು ಹಾಲಿ ಸಂಪುಟದಲ್ಲಿ ಹಲವು ಮಂದಿ ಭ್ರಷ್ಟರಿದ್ದಾರೆ. ಅವರೆಲ್ಲಾ ಜೈಲು ಸೇರಲಿದ್ದಾರೆ. ಲೋಕಾಯುಕ್ತ ವರದಿಯಂತೆ ರಾಜ್ಯದ ಬೊಕ್ಕಸಕ್ಕೆ ಅಕ್ರಮ ಗಣಿಗಾರಿಕೆಯಿಂದ 20 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ವರದಿಯಲ್ಲಿ ಪ್ರಸ್ತಾಪಿಸಿರುವಂತೆ ಅದರ ಐದು ಪಟ್ಟು ಹಣವನ್ನು ವಸೂಲು ಮಾಡಬೇಕು~ ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಈದ್ ಮತ್ತು ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದರು.

ಕೆಪಿಸಿಸಿ ಸದಸ್ಯ ಡಾ. ಬಿ.ಗುರಪ್ಪನಾಯ್ಡು, `ಸಚಿವ ಅಶೋಕ ಅವರ ಬೆಂಬಲಿಗರು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಎ.ಟಿ.ರಾಮಸ್ವಾಮಿ ಜಂಟಿ ಸದನ ಸಮಿತಿ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಗೊಂಡಿದೆ. ಆದರೂ ಸಚಿವರು ಯಾವುದೇ ಕ್ರಮ ಕೈಗೊಳ್ಳದೇ ಒತ್ತುವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ~ ಎಂದು ಆರೋಪಿಸಿದರು. 

ಶಾಸಕ ರಾಮಲಿಂಗಾರೆಡ್ಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು, ಮುಖಂಡರಾದ ಡಾ. ಅಜಯ್ ಸಿಂಗ್, ಅನ್ಸರ್ ಪಾಷಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.