ADVERTISEMENT

ರಕ್ತದಲ್ಲಿ ಕರಗುವ ಸ್ಟೆಂಟ್ ಅಳವಡಿಕೆ

ಜಯದೇವ ಆಸ್ಪತ್ರೆಯಲ್ಲಿ ರಾಷ್ಟ್ರದಲ್ಲೇ ಮೊದಲ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 19:44 IST
Last Updated 22 ಡಿಸೆಂಬರ್ 2012, 19:44 IST
ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ನೇತೃತ್ವದ ವೈದ್ಯಕೀಯ ತಂಡ ಎಪ್ಪತ್ತು ವರ್ಷದ ಹೃದ್ರೋಗಿಯೊಬ್ಬರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯಲ್ಲಿ ರಕ್ತದಲ್ಲಿ ಕರಗಿ ಬೆರೆತು ಹೋಗುವ ಸ್ಟೆಂಟ್ ಅಳವಡಿಸಿದರು
ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ನೇತೃತ್ವದ ವೈದ್ಯಕೀಯ ತಂಡ ಎಪ್ಪತ್ತು ವರ್ಷದ ಹೃದ್ರೋಗಿಯೊಬ್ಬರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯಲ್ಲಿ ರಕ್ತದಲ್ಲಿ ಕರಗಿ ಬೆರೆತು ಹೋಗುವ ಸ್ಟೆಂಟ್ ಅಳವಡಿಸಿದರು   

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ಕರೋನರಿ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯಲ್ಲಿ ರಕ್ತದಲ್ಲಿ ಕರಗಿ ಬೆರೆತು ಹೋಗುವ ಸ್ಟಂಟ್ ಅನ್ನು ಅಳವಡಿಸುವ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಚಿಕಿತ್ಸಾ ಕ್ರಮವನ್ನು ಆರಂಭಿಸಿದೆ.

ಎಪ್ಪತ್ತು ವರ್ಷದ ರೋಗಿಯೊಬ್ಬರು ಈಚೆಗೆ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಹೃದಯದ ಬಲ ರಕ್ತನಾಳವು ಶೇ 90ರಷ್ಟು ಪ್ರಮಾಣದಲ್ಲಿ ಮುಚ್ಚಿಕೊಂಡಿದ್ದರಿಂದ ನಡೆಸಿದ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆಯಲ್ಲಿ ರಕ್ತದಲ್ಲಿ ಕರಗಿ ಬೆರೆತು ಹೋಗುವ ಸ್ಟೆಂಟ್ ಅಳವಡಿಸುವ ಮೂಲಕ ಚಿಕಿತ್ಸೆ ಯಶಸ್ವಿಯಾಗಿದೆ.

ರಕ್ತದಲ್ಲಿ ಕರಗಿ ಬೆರೆತುಹೋಗುವ ಸ್ಟೆಂಟ್‌ಗಳನ್ನು `ಪಾಲಿಲ್ಯಾಕ್‌ಟೈಡ್' ಪ್ಲಾಸ್ಟಿಕ್‌ನಿಂದ  ತಯಾರಿಸಲಾಗಿದೆ. ಶರೀರದಲ್ಲಿ ಎರಡುವರೆ ವರ್ಷಗಳವರೆಗೆ ಉಳಿಯುವ ಈ ಸ್ಟೆಂಟ್ ರಕ್ತನಾಳವು ಸಾಮಾನ್ಯ ಸ್ಥಿತಿಗೆ ತಲುಪುವಾಗ ಕರಗಿ ರಕ್ತದಲ್ಲಿ ಬೆರೆಯುತ್ತದೆ. ರಕ್ತನಾಳದ ಕಾರ್ಯವೈಖರಿಯನ್ನು ನೈಜ ಸ್ಥಿತಿಗೆ ತರುವಲ್ಲಿ ನೆರವಾಗುವ ಈ ಸ್ಟೆಂಟ್ ಅಳವಡಿಕೆಗೆ ಎರಡು ಲಕ್ಷ ರೂಪಾಯಿ ವೆಚ್ಚವಾಗುತ್ತದೆ.  ಆದರೆ ಇದರ ಅಳವಡಿಕೆಯಿಂದ ರಕ್ತ ತೆಳುಗೊಳಿಸುವ ಔಷಧಗಳನ್ನು ದೀರ್ಘಕಾಲದವರೆಗೆ ಬಳಸುವ ಅಗತ್ಯವಿರುವುದಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಬಳಕೆಯಾಗುವ ಸ್ಟೆಂಟ್‌ಗಳು ಕಲೆರಹಿತ ಉಕ್ಕಿನಿಂದ ತಯಾರಾಗಿರುತ್ತವೆ. ಅವು ರೋಗಿಯ ಶರೀರದಲ್ಲಿ ಶಾಶ್ವತವಾಗಿ ಉಳಿದು ಹೋಗುವುದರಿಂದ ರಕ್ತನಾಳದಲ್ಲಿ ಉರಿತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಆಸ್ಪಿರಿನ್, ಕ್ಲೋಪಿಡೊಗ್ರೆಲ್ ಔಷಧಿಯನ್ನು ಜೀವನ ಪರ್ಯಂತ ಬಳಸುವ ಅನಿವಾರ್ಯವಿರುತ್ತದೆ. ಅಲ್ಲದೇ ಈ ಔಷಧಿಗಳ ಸೇವನೆಯಿಂದ  ಕರುಳಿನ ರಕ್ತಸ್ರಾವ ಮತ್ತು ಪಾರ್ಶ್ವವಾಯುವಿನಂತಹ ಅಡ್ಡ ಪರಿಣಾಮಗಳಿರುತ್ತವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.