ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ತಾಲ್ಲೂಕುಗಳ ರಸ್ತೆ ನಿರ್ವಹಣೆಗಾಗಿ 13ನೇ ಹಣಕಾಸು ಆಯೋಗದ ಅನುದಾನದಡಿ 153.94 ಲಕ್ಷ ರೂಪಾಯಿ ಅನುದಾನ ನಿಗದಿಪಡಿಸಲಾಗಿದ್ದು, ಈ ಬಗ್ಗೆ ಕ್ರಿಯಾಯೋಜನೆ ಸಿದ್ಧಗೊಂಡಿದೆ.
ಯೋಜನೆಯನ್ನು ಅನುಮೋದಿಸುವ ಮುನ್ನ ಸಂಬಂಧಪಟ್ಟ ರಸ್ತೆಗಳು ಜಿಲ್ಲಾ ಗ್ರಾಮೀಣ ರಸ್ತೆಗಳ ಯೋಜನೆಯಡಿ (ಡಿಆರ್‌ಆರ್‌ಪಿ)ಗೆ ಸೇರ್ಪಡೆಗೊಂಡಿರುವುದನ್ನು ದೃಢೀಕರಿಸಿಕೊಳ್ಳಬೇಕು.
ಇದರೊಂದಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್, ನಬಾರ್ಡ್ ಮತ್ತು ಎಪಿಎಂಸಿ ಯೋಜನೆಗಳಡಿ ಅಳವಡಿಸಿಕೊಂಡಿರುವ ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳನ್ನು ವಾರ್ಷಿಕ ನಿರ್ವಹಣಾ ಕಾರ್ಯಕ್ರಮದಲ್ಲಿ ಸೇರ್ಪಡೆಗೊಳಿಸುವ ಅಗತ್ಯ ಕಾಣುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿ ರಸ್ತೆ ನಿರ್ಮಾಣ ಅನುದಾನವನ್ನು ಜಿಲ್ಲಾ ಪಂಚಾಯತ್ ಸದಸ್ಯರಿಗೆ ನೀಡುವಂತೆ ಆಗಬೇಕು. ಈ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆಯಬೇಕು ಎಂದು ಸಭೆಯಲ್ಲಿ ಸದಸ್ಯರು ಒಕ್ಕೂರಲಿನಿಂದ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಸ್. ಆರ್.ವಿಶ್ವನಾಥ್, `ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು' ಎಂದು ತಿಳಿಸಿದರು.
ಗೋಪಾಲಪುರ ವ್ಯಾಪ್ತಿಯ ಗ್ರಾಮಪಂಚಾಯತ್‌ನಲ್ಲಿನ ಶಾಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಇರಿಸಲಾಗಿದ್ದ ದೊಡ್ಡ ಗಾತ್ರದ ಕಲ್ಲುಗಳನ್ನು ಎಸ್‌ಡಿಎಂಸಿ ಸದಸ್ಯರೇ ತೆಗೆದುಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸದಸ್ಯ ಜಯರಾಮಯ್ಯ ಆಗ್ರಹ ಪಡಿಸಿದರು.
ವಿವಿಧ ಗ್ರಾಮಪಂಚಾಯತ್‌ಗಳ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಡೆಸ್ಕು, ಮೇಜುಗಳ ಕೊರತೆಯಿದೆ. ಇದನ್ನು ಸರಿಪಡಿಸುವತ್ತ ಕ್ರಮ ತೆಗೆದುಕೊಳ್ಳಬೇಕು' ಎಂದು ಹೇಳಿದಾಗ ಪಂಚಾಯತ್‌ನ ಅಧ್ಯಕ್ಷೆ ವಾಣಿ ವಿಶ್ವನಾಥ್ ಅವರು, ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಆರ್ಥಿಕವಾಗಿ ಸದೃಡರಾಗಿದ್ದಾರೆ. ಇವರು ತಲಾ ಐದು ಸಾವಿರ ನೀಡಿದರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ಮೂಲಸೌಕರ್ಯವನ್ನು ಒದಗಿಸಬಹುದು' ಎಂದು ತಿಳಿಸಿದರು.
ಅಂತರ್ಜಲದ ಮಟ್ಟ ಕುಸಿಯುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಆದರೆ, 600 ಅಡಿಯವರೆಗೆ ಕೊಳವೆ ಬಾವಿಗಳನ್ನು ಕೊರೆಯುವ ಬಗ್ಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. 1200 ಅಡಿ ಕೊರೆದರೂ ನೀರು ದೊರೆಯುತ್ತಿಲ್ಲ. ಹೀಗಿದ್ದ ಮೇಲೆ ಈ ಕ್ರಿಯಾಯೋಜನೆ ಅಗತ್ಯವೇನು? ಎಂದು ಅವರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಶಾಸಕರು ಇನ್ನೂ ಮುಂದೆ ಕೊಳವೆ ಬಾವಿಗಳನ್ನು ಕೊರೆಯುವ ಸಂದರ್ಭದಲ್ಲಿ 900 ಅಡಿಗಳ ಸರಾಸರಿಯನ್ನು ಗಮನದಲ್ಲಿರಿಸಿಕೊಂಡು ಕಾರ್ಯಪ್ರವೃತ್ತರಾಗೋಣ. ಇದಲ್ಲದೇ ಸಾವಿರ ಅಡಿಗಳೂ ಕೊರೆದರೂ ನೀರು ದೊರೆಯದೇ ಇದ್ದರೆ ಆ ನೀರಿನ ಶುದ್ಧತೆಯ ಬಗ್ಗೆಯೂ ಚಿಂತನೆ ನಡೆಯಬೇಕಿದೆ. ಇದಕ್ಕಾಗಿ ನೀರಿನ ಪರೀಕ್ಷಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟರು.
ದೊಮ್ಮಸಂದ್ರ, ಅತ್ತಿಬೆಲೆ ಹಾಗೂ ಸರ್ಜಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ದಿನದ 24 ಗಂಟೆಗಳ ಕಾಲ ಒಬ್ಬರೇ ಮಹಿಳಾ ವೈದ್ಯರು ಕಾರ್ಯನಿರ್ವಹಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಜಿಲ್ಲಾ ವೈದ್ಯಾಧಿಕಾರಿ ನಾರಾಯಣ, `ಹೆಚ್ಚುವರಿ ಹುದ್ದೆಗಳನ್ನು ಅಮಾನತಿನಲ್ಲಿಟ್ಟಿರುವುದರಿಂದ ಈ ಸಮಸ್ಯೆ ಎದುರಾಗಿದ್ದು, ಸಂಬಂಧಪಟ್ಟವರಿಗೆ ಸಮಸ್ಯೆಯ ಗಂಭೀರತೆಯ ಬಗ್ಗೆ ಮಾಹಿತಿ ನೀಡಲಾಗುವುದು. ಇದರೊಂದಿಗೆ ಡೆಂಗೆ, ಎಚ್1ಎನ್1ನಂತಹ ಸಾಂಕ್ರಾಮಿಕ ರೋಗದಂತಹ ಕಾಯಿಲೆಯ ಬಗ್ಗೆ ವ್ಯಾಪಕ ಅಭಿಯಾನ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.