
ಬೆಂಗಳೂರು:  ರಸ್ತೆ ಬದಿಯಲ್ಲಿ ಹಾಕಿದ್ದ ರಾಜಕಾಲುವೆಯ ಹೂಳಿನಲ್ಲಿ ಆಳೆತ್ತರಕ್ಕೆ ಬೆಳೆದ ಗಿಡಗಳು ತಮ್ಮ ಇತಿಹಾಸವನ್ನು ಹೇಳುತ್ತಿದ್ದವು. ನೀರಿನ ಹರಿವು ಹೆಚ್ಚಿಸುವ ಉದ್ದೇಶದಿಂದ ರಾಜಕಾಲುವೆ ಯಿಂದ ತೆರವುಗೊಳಿಸಿ ರಸ್ತೆ ಬದಿಯಲ್ಲಿ ಹಾಕಿದ್ದ ಫಲವತ್ತಾದ ಮಣ್ಣಿನಲ್ಲಿ ಗಿಡ ಗಳು ಸೊಂಪಾಗಿ ಬೆಳೆದಿದ್ದವು. ಇದಕ್ಕೆ ಅವಕಾಶ ಮಾಡಿಕೊಟ್ಟ ಬಿಬಿ ಎಂಪಿ ಅಧಿ ಕಾರಿಗಳಿಗೆ ಕೃತಜ್ಞತೆ ಸೂಚಿಸು ವಂತಿದ್ದವು.
 
 ಜೆ.ಪಿ.ನಗರ 6ನೇ ಹಂತದ ಹೊರ ವರ್ತುಲ ರಸ್ತೆಯಲ್ಲಿರುವ ನಾಗಾರ್ಜುನ ಪ್ರೀಮಿಯರ್ ಅಪಾರ್ಟ್‌ಮೆಂಟ್ ಬಳಿ ಕಂಡುಬಂದ ದೃಶ್ಯವಿದು.
 
 ಎರಡೂವರೆ ತಿಂಗಳ ಹಿಂದೆ ಬಿದ್ದ ಭಾರಿ ಮಳೆಯಿಂದಾಗಿ ರಾಜಕಾಲುವೆ ಉಕ್ಕಿ ಜೆ.ಪಿ.ನಗರ 1ನೇ ಹಂತದಲ್ಲಿನ ನಾಗಾರ್ಜುನ ಎನ್‌ಕ್ಲೇವ್ ಅಪಾರ್ಟ್ ಮೆಂಟ್ ನೆಲಮಹಡಿಗೆ ನೀರು ನುಗ್ಗಿತ್ತು. ಇದರಿಂದ ಪಾರ್ಕಿಂಗ್ ಸ್ಥಳದಲ್ಲಿದ್ದ 30ಕ್ಕೂ ಹೆಚ್ಚು ಕಾರುಗಳು ಮುಳುಗಡೆ ಯಾಗಿದ್ದವು. ಹೊರ ವರ್ತುಲ ರಸ್ತೆಗೆ ನಿರ್ಮಿಸಿರುವ ಸೇತುವೆ ಬಳಿ (ಐಸಿಐಸಿಐ ಬ್ಯಾಂಕ್ ಬಳಿ) ಥರ್ಮಕೋಲ್, ಪ್ಲಾಸ್ಟಿಕ್ ಕವರ್, ಚಪ್ಪಲಿ ಸೇರಿದಂತೆ ಅನೇಕ ವಸ್ತುಗಳು ಸಂಗ್ರಹಗೊಂಡಿದ್ದವು. ಇದ ರಿಂದ ನೀರು  ಸರಾಗವಾಗಿ ಹರಿಯದೆ ಉಕ್ಕಿ ಅಪಾರ್ಟ್‌ಮೆಂಟ್‌ಗೆ ನುಗ್ಗಿತ್ತು.
 
 ಸ್ಥಳಕ್ಕೆ ಭೇಟಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು, ಸೇತುವೆ ಬಳಿ ನಿರ್ಮಿಸಿದ್ದ ಗೋಡೆಯನ್ನು ಜೆಸಿಬಿ ಸಹಾಯದಿಂದ ಕೆಡವಿ ಬಳಿಕ ರಾಜಕಾಲುವೆಯಲ್ಲಿ ತುಂಬಿದ್ದ ಹೂಳು ಹಾಗೂ ಕಸವನ್ನು ಮೇಲೆತ್ತಿ ರಸ್ತೆ ಬದಿಯಲ್ಲಿ ಹಾಕಿದ್ದರು.
 ಅದೇ ರೀತಿ ನಾಗಾರ್ಜುನ ಪ್ರೀಮಿ ಯರ್ ಅಪಾರ್ಟ್‌ಮೆಂಟ್ ಪಕ್ಕದ ಕಾಲು ವೆಯಲ್ಲಿದ್ದ ಹೂಳನ್ನು ಎತ್ತಿ ಸೇತುವೆ ಮೇಲೆ ಹಾಕಲಾಗಿತ್ತು. ಈ ಹೂಳಿನಲ್ಲಿ ಈಗ ಗಿಡಗಳು ಬೆಳೆದು ನಿಂತಿವೆ.
 
 ‘ರಾಜಕಾಲುವೆಯ ಹೂಳನ್ನು ಹೊರಗೆ ಹಾಕಿ ಎರಡೂವರೆ ತಿಂಗಳು ಕಳೆದಿವೆ. ಆದರೆ, ಅದನ್ನು ಇನ್ನೂ ತೆರವುಗೊಳಿಸಿಲ್ಲ. ಮಳೆ ಬಂದರೆ ಹೂಳು ಮತ್ತೆ ಕಾಲುವೆ ಸೇರುತ್ತದೆ’ ಎಂದು ನಾಗಾರ್ಜುನ ಪ್ರೀಮಿಯರ್ ಅಪಾರ್ಟ್ ಮೆಂಟ್‌ನ ಭದ್ರತಾ ಸಿಬ್ಬಂದಿ ಬಿ.ಚಂದ್ರು ಹೇಳಿದರು.
 
 ‘ಜೆ.ಪಿ.ನಗರ ಒಂದನೇ ಹಂತದಿಂದ ಸಾರಕ್ಕಿ ಕೆರೆಗೆ ಸಂಪರ್ಕ ಕಲ್ಪಿಸುವ ಈ ರಾಜಕಾಲುವೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಮಳೆ ಬಂದು ಅವಾಂತರ ಸೃಷ್ಟಿಯಾದಾಗ ಮಾತ್ರ ಬಿಬಿ ಎಂಪಿ ಅಧಿಕಾರಿಗಳು ಎಚ್ಚೆತ್ತು ಕೊಳ್ಳು ತ್ತಾರೆ’ ಎಂದು ಸ್ಥಳೀಯ ನಿವಾಸಿ ರಘು ದೂರಿದರು.
 
 ‘ರಾಜಕಾಲುವೆಯಲ್ಲಿನ ಕಸವನ್ನು ತೆರವುಗೊಳಿಸಿ ಎರಡೂವರೆ ತಿಂಗಳು ಕಳೆದವು. ಈಗ ಮತ್ತೆ ರಾಶಿ ರಾಶಿ ಕಸ ಸಂಗ್ರಹಗೊಂಡಿದೆ. ಜೋರು ಮಳೆ ಬಂದರೆ ಅಪಾರ್ಟ್‌ಮೆಂಟ್‌ಗಳು, ಮನೆ ಗಳಿಗೆ ನೀರು ನುಗ್ಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದರು.
 
 ಮಾರೇನಹಳ್ಳಿ ರಾಜಕಾಲುವೆ ನಿರ್ವಹಣೆ: ಮಾರೇನಹಳ್ಳಿ ಕೆರೆಯಂಗಳ ಪ್ರದೇಶ ದಿಂದ ಜೆ.ಪಿ.ನಗರ 2ನೇ ಹಂತದ 18ನೇ ‘ಬಿ’ ಮುಖ್ಯರಸ್ತೆಯಲ್ಲಿ ಹಾದು ಹೋಗಿ ರುವ ರಾಜಕಾಲುವೆಯ ನಿರ್ವಹಣೆ ಸಮಾಧಾನಕರವಾಗಿದೆ. ರಾಜಕಾಲುವೆ ಗಾತ್ರದಲ್ಲಿ ಹಿರಿದಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗು ತ್ತಿದೆ. ಆದರೂ ಕಾಲುವೆಯಲ್ಲಿ ಕಸ–ಕಡ್ಡಿ, ಪ್ಲಾಸ್ಟಿಕ್ ವಸ್ತುಗಳು ಸಂಗ್ರಹಗೊಳ್ಳುತ್ತಿವೆ. ಅಲ್ಲಲ್ಲಿ ಹೂಳು ತುಂಬಿಕೊಂಡಿದೆ.
 
 ಮಾರೇನಹಳ್ಳಿಯ ಅಕ್ಕಮಹಾದೇವಿ ಉದ್ಯಾನದಲ್ಲಿರುವ ಬಿದಿರು, ಮರಗ ಳಿಂದ ಉದುರುವ ಎಲೆಗಳು ರಾಜಕಾ ಲುವೆಗೆ ಬೀಳುತ್ತಿವೆ. ಇದರಿಂದ ಕಾಲುವೆ ಯಲ್ಲಿ ಕಸದ ಪ್ರಮಾಣ ಹೆಚ್ಚುತ್ತಿದೆ.
 
 ‘ಮಾರೇನಹಳ್ಳಿ ಕೆರೆಯಂಗಳದಲ್ಲಿ ನ ರಾಜಕಾಲುವೆಯ ಕಸವನ್ನು ಆಗಾಗ್ಗೆ ತೆರವುಗೊಳಿಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.