ADVERTISEMENT

ರಾಜಕಾಲುವೆಯ ದಿಕ್ಕನ್ನೇ ಬದಲಿಸಿದ ಪಾಲಿಕೆ!

ಒತ್ತುವರಿ ತೆರವು ಕಾರ್ಯಾಚರಣೆ ಆರಂಭ * ಮೊದಲ ದಿನವೇ 32 ಸ್ವತ್ತು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 19:49 IST
Last Updated 6 ಆಗಸ್ಟ್ 2016, 19:49 IST
ರಾಜುಕಾಲುವೆ ದಂಡೆಯ ಮೇಲಿನ ಮನೆಯ ಭಾಗವನ್ನು ಕೆಡವಲಾಯಿತು
ರಾಜುಕಾಲುವೆ ದಂಡೆಯ ಮೇಲಿನ ಮನೆಯ ಭಾಗವನ್ನು ಕೆಡವಲಾಯಿತು   

ಬೆಂಗಳೂರು: ನಗರದ ಪ್ರವಾಹಪೀಡಿತ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ರಾಜಕಾಲುವೆ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಶನಿವಾರ ಆರಂಭಿಸಿತು. ಆದರೆ, ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರದಲ್ಲಿ ನಡೆದ ತೆರೆಮರೆ ಸಂಧಾನದಿಂದ ರಾಜಕಾಲುವೆ ದಿಕ್ಕನ್ನೇ ಬದಲಿಸಲು ತೀರ್ಮಾನಿಸಲಾಯಿತು!

ನಗರದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದೆ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಬಿಎಂಪಿ, ತನ್ನ ಅನುಮತಿಯಿಂದಲೇ ನಿರ್ಮಾಣವಾಗಿದ್ದ ಕೆಲವು ಕಟ್ಟಡಗಳನ್ನು ತಾನೇ ನೆಲಸಮ ಮಾಡಿತು. ಮೊದಲ ದಿನ 32 ಸ್ವತ್ತುಗಳನ್ನು ವಶಕ್ಕೆ ಪಡೆಯಿತು.

ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರ, ಮಹದೇವಪುರ ವಲಯದ ಕಸವನಹಳ್ಳಿ ಹಾಗೂ ಯಲಹಂಕ ವಲಯದ ಶಿವನಹಳ್ಳಿಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಲಾಯಿತು. ಈ ಭಾಗದಲ್ಲಿ ರಾಜಕಾಲುವೆಗಳ ಮೇಲೆ ಕಟ್ಟಡಗಳು ಮೇಲೆದ್ದಿದ್ದರಿಂದ ಹಲವು ಬಡಾವಣೆಗಳು ಜಲಾವೃತವಾಗಿದ್ದವು.

ಸ್ವತ್ತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳೇ ನೀಡಿದ್ದ ‘ಎ’ ಖಾತಾ, ನಕ್ಷೆ ಮಂಜೂರು, ವಾಸಯೋಗ್ಯ ಪ್ರಮಾಣ ಪತ್ರಗಳನ್ನು ಅಲ್ಲಿನ ನಿವಾಸಿಗಳು ಪ್ರದರ್ಶಿಸಿದರು. ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಅಧಿಕಾರಿಗಳು ಅರ್ಥ್‌ ಮೂವರ್‌ಗಳ ನೆರವಿನಿಂದ ಮನೆಗಳನ್ನು ನೆಲಸಮಗೊಳಿಸಿದರು.

ಮಧ್ಯರಾತ್ರಿಯೇ ಅವನಿ ಶೃಂಗೇರಿನಗರದ ಎಂಟನೇ ಕ್ರಾಸ್‌ಗೆ ಬಂದ ಬಿಬಿಎಂಪಿ ಅಧಿಕಾರಿಗಳು ಕಟ್ಟಡಗಳನ್ನು ಧ್ವಂಸಗೊಳಿಸಬೇಕಾದ ಭಾಗಗಳಿಗೆ ಗುರುತು ಹಾಕಿದರು. ಬೆಳಗಿನ ಹೊತ್ತಿಗೆ ನಾಲ್ಕು ಅರ್ಥ್‌ ಮೂವರ್‌ಗಳು ಅಲ್ಲಿಗೆ ಧಾವಿಸಿದವು. ಜಾಹ್ನವಿ ಅಪಾರ್ಟ್‌ಮೆಂಟ್‌ ಮುಂಭಾಗದ ಕಾಂಪೌಂಡ್‌ ಕಡೆಯಿಂದ ಅತಿಕ್ರಮಣ ತೆರವು ಕಾರ್ಯಾಚರಣೆ ಶುರುವಾಯಿತು.

ಪಕ್ಕದ ಪ್ರದೀಪ್‌ ರಾವ್‌ ಅವರ ಮನೆಯತ್ತ ಯಂತ್ರಗಳು ಬಂದಾಗ ಕುಟುಂಬದ ಸದಸ್ಯರೆಲ್ಲ ಮನೆ ಒಡೆಯದಂತೆ ಅಧಿಕಾರಿಗಳ ಮುಂದೆ ಅಂಗಲಾಚಿ ಬೇಡಿಕೊಂಡರು. ಆದರೆ, ತನ್ನ ಮೂತಿಯನ್ನು ಎರಡನೇ ಅಂತಸ್ತಿನವರೆಗೆ ಚಾಚಿ ನಿಂತಿದ್ದ ಅರ್ಥ್‌ ಮೂವರ್‌, ಮಾಳಿಗೆ ಮೇಲಿದ್ದ ಸೋಲಾರ್‌ ಹೀಟರ್‌ನ ಘಟಕವನ್ನು ಕೆಳಕ್ಕೆ ಎಳೆಯಿತು. ‘ಅಯ್ಯೋ, ಸೋಲಾರ್‌ ಹೀಟರ್‌ ಬಿತ್ತು’ ಎಂದು ಪ್ರದೀಪ್‌ ಅವರ ಪತ್ನಿ ಉಷಾ ಕೂಗಿಕೊಂಡರು. ಮರುಕ್ಷಣವೇ ತರಗೆಲೆಯಂತೆ ಕಟ್ಟಡವೂ ಉರುಳಿಬಿತ್ತು.

ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿರುವ ಕುರಿತು ಟಿ.ವಿಯಲ್ಲಿ ಮಾಹಿತಿ ಬಿತ್ತರವಾಗುತ್ತಿದ್ದಂತೆ ಅದೇ ಪ್ರದೇಶದಲ್ಲಿದ್ದ ಅಪ್ಪನ (ವಿ.ಪ್ರಕಾಶ್‌) ಮನೆಗೆ ಹೋಗಿದ್ದ ಪ್ರಿಯಾಂಕಾ ಬಿಳೇಕಹಳ್ಳಿಯಿಂದ ಧಾವಿಸಿ ಬಂದಿದ್ದರು. ಆದರೆ, ಆ ವೇಳೆಗಾಗಲೇ ಮನೆ ಗೋಡೆಗಳಿಲ್ಲದೆ ಹಂದರಂತಾಗಿತ್ತು. ಕಣ್ಣೀರು ಉಕ್ಕಿ ಹರಿಯಿತು.

ಈ ಎರಡು ಮನೆಗಳಲ್ಲದೆ ಅಲ್ಲಿಂದ ಮುಂದಕ್ಕೆ ಎಂಟು ಮನೆಗಳ ನಡು ಭಾಗವನ್ನೇ ಸೀಳಿಕೊಂಡು ರಾಜಕಾಲುವೆ ಉದ್ಭವ ಆಗಬೇಕಿತ್ತು. ಆ ವೇಳೆಗೆ ಕಾರ್ಯಾಚರಣೆ ವೀಕ್ಷಿಸಲು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಬಿಎಂಟಿಎಫ್‌ ಎಡಿಜಿಪಿ ಸುನಿಲ್‌ಕುಮಾರ್‌ ಬಂದರು. ಅವರ ಸುತ್ತಲೂ ಕಿಕ್ಕಿರಿದ ಬಡಾವಣೆ ನಿವಾಸಿಗಳು ಕಾರ್ಯಾಚರಣೆ ನಿಲ್ಲಿಸುವಂತೆ ಬೇಡಿಕೊಂಡರು.

‘ರಾಜಕಾಲುವೆ ಮೇಲಿರುವ ಈ ಮನೆಗಳನ್ನು ಹಾಗೇ ಬಿಟ್ಟರೆ ಸುತ್ತಲಿನ ಎಲ್ಲ ಬಡಾವಣೆಗಳ ಜನ ತೊಂದರೆಗೆ ಈಡಾಗುತ್ತಾರೆ. ನೀರಿಗೆ ದಾರಿ ಮಾಡಿಕೊಡಲು ಕಟ್ಟಡ ತೆರವುಗೊಳಿಸುವುದು ಅನಿವಾರ್ಯ’ ಎಂದು ಆಯುಕ್ತರು ಹೇಳಿದರು.

ಮಹಿಳೆಯರೆಲ್ಲ ಒಟ್ಟಾಗಿ ಕಣ್ಣೀರು ಹಾಕುತ್ತಾ ನಿಂತರು. ‘ನೀವು ಇಲ್ಲಿ ಮನೆ ಕಟ್ಟಿದ್ದೇ ತಪ್ಪು, ಈಗ ಏನೂ ಮಾಡಲು ಆಗಲ್ಲ’ ಎಂದು ಅಧಿಕಾರಿಗಳು ಅವರಿಗೆ ಹೇಳಿ ಕಳುಹಿಸಿದರು.

ವಿಧಾನ ಪರಿಷತ್‌ ಸದಸ್ಯ ಲೇಹರ್‌ ಸಿಂಗ್‌ ಸಹ ಸ್ಥಳದಲ್ಲಿ ಪ್ರತ್ಯಕ್ಷವಾದರು. ಅವರ ಮಗಳ ಗೆಳತಿಯೊಬ್ಬರ ಮನೆಯೂ ಈ ಪ್ರದೇಶದಲ್ಲಿ ಇದ್ದುದರಿಂದ ಅವರು ಬಂದಿದ್ದರು. ಅವರೂ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ಸ್ಥಳೀಯ ಕಾರ್ಪೊರೇಟರ್‌ ಮಧ್ಯಸ್ಥಿಕೆಯಲ್ಲಿ ತೆರೆಮರೆಯಲ್ಲಿ ಪರಿಹಾರ ಸೂತ್ರವೊಂದನ್ನು ರೂಪಿಸಲಾಯಿತು. ಕಾಲುವೆ ನಿರ್ಮಾಣಕ್ಕೆ ರಸ್ತೆ ಅಂಚಿನಿಂದ ಎಂಟು ಅಡಿಯಷ್ಟು ಮನೆಯ ಜಾಗ ತೆರವು ಮಾಡಿಕೊಟ್ಟರೆ, ರಾಜಕಾಲುವೆ ದಿಕ್ಕು ತಿರುಗಿಸಿ, ಕಟ್ಟಡಗಳನ್ನು ನೆಲಸಮ ಮಾಡದಂತೆ ತಡೆಯಲಾಗುವುದು ಎಂಬುದೇ ಆ ಸಂಧಾನ ಸೂತ್ರವಾಗಿತ್ತು.ಎಂಟು ಅಡಿಯಷ್ಟು ಕಟ್ಟಡವನ್ನು ಬಿಟ್ಟುಕೊಟ್ಟರೆ, ಮಿಕ್ಕ ಭಾಗವಾದರೂ ಉಳಿಯುವುದಲ್ಲ ಎಂದು ನಿವಾಸಿಗಳು ಒಪ್ಪಿಕೊಂಡರು.

ರಸ್ತೆಯ ಅಂಚಿನಿಂದ ಎಂಟು ಮೀಟರ್‌ವರೆಗಿನ ಕಟ್ಟಡದ ಪ್ರದೇಶದಲ್ಲಿ ಕಾಲುವೆ ನಿರ್ಮಾಣ ಮಾಡಲಾಗುವುದು ಎಂದು ಸ್ಥಳದಲ್ಲಿದ್ದ ಎಂಜಿನಿಯರ್‌ಗಳು ತಿಳಿಸಿದರು.
ಎಂಟೂ ಕಟ್ಟಡಗಳ ಕಾಂಪೌಂಡ್‌ ಹಾಗೂ ಕಟ್ಟಡದ ತುಸು ಭಾಗವನ್ನು ಒಡೆಸಿದ ಅಧಿಕಾರಿಗಳು, ‘ಎಂಟು ಅಡಿ ಎಲ್ಲಿಯವರೆಗೆ ಬರುತ್ತದೆ ಎಂಬುದನ್ನು ಗುರುತು ಹಾಕುತ್ತೇವೆ.

ಅಷ್ಟೂ ಪ್ರದೇಶವನ್ನು ತೆರವು ಮಾಡಬೇಕು’ ಎಂದು ಹೇಳಿ, ಅರ್ಥ್‌ ಮೂವರ್‌ಗಳೊಂದಿಗೆ ಜಾಗ ಖಾಲಿ ಮಾಡಿದರು. ‘ರಾಜಕಾಲುವೆ ದಿಕ್ಕು ತಿರುಗಿಸುವುದೇ ಆಗಿದ್ದಲ್ಲಿ ನಮ್ಮ ಮನೆಗಳನ್ನು ಒಡೆದಿದ್ದೇಕೆ’ ಎಂದು ಆ ವೇಳೆಗಾಗಲೇ ಉರುಳಿಬಿದ್ದಿದ್ದ ಎರಡು ಮನೆಗಳ ಮಾಲೀಕರು ಕೇಳಿದರು. ‘ಕಚೇರಿಗೆ ಬಂದು ಮಾತನಾಡಿ’ ಎಂದು ಅಧಿಕಾರಿಗಳು ಅವರನ್ನು ದಬಾಯಿಸಿ ಕಳುಹಿಸಿದರು.

ಅಧಿಕಾರಿಗಳ ವಿರುದ್ಧವೂ ಕ್ರಮ
‘ರಾಜಕಾಲುವೆ ಎಂಬ ಅರಿವಿದ್ದರೂ ಅದರ ಮೇಲೆ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೊಟ್ಟು ನಮ್ಮ ಅಧಿಕಾರಿಗಳೂ ತಪ್ಪು ಮಾಡಿದ್ದಾರೆ. ಹಾಗೆ ಅನುಮತಿ ಕೊಟ್ಟ ಎಲ್ಲ ಅಧಿಕಾರಿಗಳ ವಿವರ ಕಲೆ ಹಾಕಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು’ ಎಂದು ಆಯುಕ್ತರು ಹೇಳಿದರು.

‘ಬಡಾವಣೆ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಮಾರಾಟ ಮಾಡಿದ ಬಿಲ್ಡರ್‌ಗಳ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.‘ರಾಜಕಾಲುವೆ ಅತಿಕ್ರಮಿಸಿ ಮನೆ ಕಟ್ಟಿದವರ ವಿರುದ್ಧ ಬಿಎಂಟಿಎಫ್‌ನಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ’ ಎಂದು ತಿಳಿಸಿದರು.

ಮಂಗಳವಾರ–ಶನಿವಾರ ಕಾರ್ಯಾಚರಣೆ:  ಒತ್ತುವರಿ ತೆರವಿಗೆ ಪ್ರತಿ ಮಂಗಳವಾರ ಹಾಗೂ ಶನಿವಾರ ಕಾರ್ಯಾಚರಣೆ ನಡೆಯಲಿದೆ. ಬಿಎಂಟಿಎಫ್‌ ವತಿಯಿಂದ ಈ ಕಾರ್ಯಾಚರಣೆಗೆ ಭದ್ರತೆ ಒದಗಿಸಲಾಗುತ್ತದೆ ಎಂದು ಮುಖ್ಯ ಎಂಜಿನಿಯರ್‌ (ಬೃಹತ್‌ ನೀರುಗಾಲುವೆ) ಸಿದ್ದೇಗೌಡ ಮಾಹಿತಿ ನೀಡಿದರು.

ನಾಯಿಗಳಿವೆ ಹುಷಾರ್‌
‘ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಾಗ ಮಹಿಳೆಯೊಬ್ಬರು ದುಃಖಿಸುತ್ತಿದ್ದ ದೃಶ್ಯವನ್ನು ಚಿತ್ರೀಕರಿಸಲು ಹೋಗಿದ್ದ ಮಾಧ್ಯಮ ಪ್ರತಿನಿಧಿಗಳಿಗೆ, ‘ಅಳುತ್ತಿರುವ ಅಮ್ಮನಿಗೆ ಸಮಾಧಾನ ಹೇಳುವುದನ್ನು ಬಿಟ್ಟು, ಶೂಟಿಂಗ್‌ ಮಾಡುತ್ತೀರಾ? ನಮ್ಮ ಮನೆಯಲ್ಲಿ ನಾಯಿಗಳಿವೆ. ನಿಮ್ಮ ಮೇಲೆ ಬಿಡುತ್ತೇವೆ ಹುಷಾರ್‌’ ಎಂದು ಆ ಮಹಿಳೆಯ ಪುತ್ರಿಯರು ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT