ADVERTISEMENT

`ರಾಜಕಾಲುವೆ ಒತ್ತುವರಿ- ಶೀಘ್ರ ಕ್ರಮ'

ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST
ವಕೀಲರ ಸಂಘ ಬುಧವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್ ಮಾತನಾಡಿದರು. ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಚಿತ್ರದಲ್ಲಿದ್ದಾರೆ
ವಕೀಲರ ಸಂಘ ಬುಧವಾರ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್ ಮಾತನಾಡಿದರು. ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಚಿತ್ರದಲ್ಲಿದ್ದಾರೆ   

ಬೆಂಗಳೂರು: `ಬೃಹತ್ ಬೆಂಗಳೂರಿನಲ್ಲಿ ಒಟ್ಟು 840 ಕಿಲೋ ಮೀಟರ್ ರಾಜಕಾಲುವೆ ಇದೆ. ಇದರಲ್ಲಿ ಕೆಲಭಾಗ ಒತ್ತುವರಿಯಾಗಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ಮಾರ್ಗ ಬದಲಾಯಿಸಿ ಕಾಲುವೆ ನಿರ್ಮಿಸಲಾಗಿದೆ. ಇದನ್ನು ಸದ್ಯದಲ್ಲೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದರು.

ಬೆಂಗಳೂರು ವಕೀಲರ ಸಂಘ ಬುಧವಾರ `ಬೆಂಗಳೂರು ನಗರದ ಸ್ವಚ್ಛತೆ' ಕುರಿತಂತೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾಲುವೆಯನ್ನು ಮಾರ್ಗ ಬದಲಿಸಿ ಕಟ್ಟಿರುವ ಕಾರಣ ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ ಎಂದರು.

`ರಾಜಕಾಲುವೆಗಳ ಒಳಭಾಗದ ಗೋಡೆಗಳನ್ನು ಕಲ್ಲುಗಳಿಂದ ನಿರ್ಮಿಸಿದ್ದು, ಅದು ನೀರಿನ ಹರಿಯುವಿಕೆಯಿಂದ ಕೆಳಭಾಗದಲ್ಲಿ ಕುಸಿಯುತ್ತಿದೆ. ಇದರಿಂದಾಗಿ ನೀರು ಹರಿಯಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಕ್ರೀಟ್ ಬಳಸಿ ಮತ್ತೆ ಗೋಡೆಗಳನ್ನು ನಿರ್ಮಿಸುವ ಅಗತ್ಯವಿದೆ' ಎಂದು ತಿಳಿಸಿದರು.

`ನಗರದ ಸ್ವಚ್ಛತೆಗಾಗಿ 18ರಿಂದ 20 ಸಾವಿರ ಪೌರ ಕಾರ್ಮಿಕರು ನಿತ್ಯ ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಚ್ಚುಕಟ್ಟಾಗಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ. ಶ್ರೀಧರ್ ರಾವ್ ಮಾತನಾಡಿ, `ಜನಸಂಖ್ಯೆಗೆ ಅನುಗುಣವಾಗಿ ನಗರದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ಚರಂಡಿಗಳನ್ನು ಮರು ನಿರ್ಮಾಣ ಮಾಡಬೇಕು. ಇರುವ ಸಾರ್ವಜನಿಕ ಶೌಚಾಲಯಗಳ ಜೊತೆ ಮತ್ತಷ್ಟು ಶೌಚಾಲಯಗಳ ನಿರ್ಮಾಣ ಮಾಡಿ, ಅವುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಬೇಕು' ಎಂದು ಸಲಹೆ ನೀಡಿದರು.

`ನಗರದ ಸಂಚಾರ ದಟ್ಟಣೆ ನಿವಾರಿಸಲು ರಸ್ತೆಗಳ ವಿಸ್ತರಣೆ, ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಅಗತ್ಯವಿದೆ. ಇವುಗಳ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯುವುದು ಸೂಕ್ತವಲ್ಲ. ಅದಕ್ಕೆ ಬದಲಿ ವ್ಯವಸ್ಥೆಯನ್ನು ಹುಡುಕಬೇಕು. ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಗೆ ಧಕ್ಕೆ ತರಬಾರದು' ಎಂದು ಸಲಹೆ ನೀಡಿದರು.

`ಉದ್ಯಾನ ನಗರದಲ್ಲಿ ಉದ್ಯಾನಗಳ  ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಒತ್ತುವರಿಯಾಗಿರುವ ಉದ್ಯಾನಗಳನ್ನು ಮತ್ತೆ ವಶಕ್ಕೆ ಪಡೆದು, ನಿರ್ವಹಣೆ ಮಾಡುವತ್ತ ಬಿಬಿಎಂಪಿ ಗಮನ ಹರಿಸಬೇಕು. ಜೊತೆಗೆ ಉಳಿದಿರುವ ಕೆರೆಗಳ ಹೂಳನ್ನು ತೆಗೆದು ಮಳೆ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಬೇಕು' ಎಂದು ಸಲಹೆ ನೀಡಿದರು.

`ಹೈಕೋರ್ಟ್ ಹಾಗೂ ಸಿವಿಲ್ ನ್ಯಾಯಾಲಯದ ಆವರಣಗಳಲ್ಲಿ ಕಸವನ್ನು ಸ್ವಚ್ಛಗೊಳಿಸಿ, ಕಸದಬುಟ್ಟಿಗಳನ್ನು ಇರಿಸುವ ಜವಾಬ್ದಾರಿಯನ್ನು ಬಿಬಿಎಂಪಿ ವಹಿಸಿಕೊಳ್ಳಬೇಕು' ಎಂದು ಮನವಿ ಮಾಡಿದರು.

ಜನರಿಗೆ ಅರಿವಿಲ್ಲ
`ನಗರದ ಸ್ವಚ್ಛತೆ ಬಗ್ಗೆ ಜನರಿಗೆ ಅರಿವಿಲ್ಲ. ನಾವು ನಮ್ಮ ನಗರವನ್ನು ಕಸದ ತೊಟ್ಟಿಯಂತೆ ಕಾಣುತ್ತೇವೆ. ಕಂಡ ಕಂಡಲ್ಲಿ ಕಸವನ್ನು ಎಸೆಯುತ್ತೇವೆ. ಜನರ ಈ ಮನೋಭಾವ ಬದಲಾಗದ ಹೊರತು ನಗರವನ್ನು ಸ್ವಚ್ಛವಾಗಿಡಲು ಆಗುವುದಿಲ್ಲ'.
- ಎಂ.ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT