ADVERTISEMENT

ರಾಜೀವ್‌ ಗಾಂಧಿ ವಿ.ವಿಯಲ್ಲಿ ಪರೀಕ್ಷೆ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಬೆಂಗಳೂರು: ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುತ್ತಾರೆ. ರೀ ಟೋಟಲಿಂಗ್‌ನಲ್ಲೂ ಅವರ ಅಂಕ ಬದಲಾವಣೆ ಆಗುವುದಿಲ್ಲ. ಪೂರಕ ಪರೀಕ್ಷೆಗೆ 15 ದಿನಗಳು ಇವೆ ಎನ್ನುವಾಗ ಈ ವಿದ್ಯಾರ್ಥಿಗಳು ಏಕಾಏಕಿ ಉತ್ತೀರ್ಣರಾಗಿರುತ್ತಾರೆ!

ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್‌ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯ ನೇಮಿಸಿರುವ ಆಂತರಿಕ ಸಮಿತಿಯು ತನ್ನ ವರದಿಯನ್ನು ಕುಲಪತಿ ಅವರಿಗೆ ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಿದೆ.

ಈ ನಡುವೆ, ನಗರ ಮೂಲದ ರಮೇಶ್‌ ಲಾಜಿಸ್ಟಿಕ್‌ ಸಾಫ್ಟ್‌ವೇರ್‌ ಕಂಪೆನಿ  ಜತೆಗೆ ಕೈಜೋಡಿಸಿ ವಿಶ್ವವಿ ದ್ಯಾಲಯದ ಮೌಲ್ಯಮಾಪನ ಕುಲಸಚಿವರು ಪರೀಕ್ಷಾ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗುವುದು ಎಂದು ತಿಲಕನಗರ ಪೊಲೀಸರು ತಿಳಿಸಿದ್ದಾರೆ.

‘ಪರೀಕ್ಷಾ ವಿಭಾಗದಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ವಿದ್ಯಾರ್ಥಿಗಳಿಂದ ಹಣ ಪಡೆದು ಅನುತ್ತೀರ್ಣ ವಿದ್ಯಾರ್ಥಿಗಳನ್ನು ಉತ್ತೀರ್ಣರನ್ನಾಗಿ ಮಾಡಲಾಗಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

2012ರ ಡಿಸೆಂಬರ್‌ನಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಪ್ರಥಮ ಎಂಬಿಬಿಎಸ್‌ ವಿದ್ಯಾರ್ಥಿ ನಿ ಎರಡು ವಿಷಯಗಳಲ್ಲಿ, ಕಿಮ್ಸ್‌ನ ಒಬ್ಬ ವಿದ್ಯಾರ್ಥಿನಿ ಎಲ್ಲ ವಿಷಯಗಳಲ್ಲಿ, ಮತ್ತೊಬ್ಬ ವಿದ್ಯಾರ್ಥಿನಿ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು.

‘ವಿವಿಯಲ್ಲಿ ಪುನರ್‌ ಮೌಲ್ಯಮಾಪನದ ವ್ಯವಸ್ಥೆ ಇಲ್ಲ. ಈ ವಿದ್ಯಾರ್ಥಿಗಳು ರೀ ಟೋಟಲಿಂಗ್‌ಗೆ ಅರ್ಜಿ ಸಲ್ಲಿಸಿದರು. ಅಲ್ಲಿಯೂ ಅಂಕಗಳ ಬದಲಾವಣೆ ಆಗಿರಲಿಲ್ಲ. ವಿವಿಯ ವೆಬ್‌ಸೈಟ್‌ನಲ್ಲಿ ಸಹ ಈ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಪ್ರಕಟಿಸಲಾಗಿತ್ತು. ಪೂರಕ ಪರೀಕ್ಷೆಗೆ 15 ದಿನಗಳು ಇವೆ ಎನ್ನುವಾಗ ಈ ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಆಯಾ ಕಾಲೇಜಿಗೆ ಫಲಿತಾಂಶ ಬರುತ್ತದೆ. ಮೌಲ್ಯಮಾಪನ ಕುಲಸಚಿವ ಎನ್‌.ಎಸ್‌.ಅಶೋಕ್‌ ಕುಮಾರ್‌ ಅವರ ಕೈಚಳಕದಿಂದ ಈ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಆಂತರಿಕ ಸಮಿತಿಯು ವರದಿ ಸಲ್ಲಿಸಿದೆ.
‘ಈ ಫಲಿತಾಂಶವನ್ನು ವಾಪಸ್‌ ಪಡೆಯಬೇಕು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.