ADVERTISEMENT

ರಾಜ್ಯದಲ್ಲಿ ಕೆಜೆಪಿಗೆ ಭವಿಷ್ಯವಿಲ್ಲ: ಸುಷ್ಮಾ

ಬಿಜೆಪಿ ಪ್ರಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮೇ 5ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರ ಕಾರ್ಯಕ್ರಮಗಳಿಗೆ ಇಲ್ಲಿ ಭಾನುವಾರ ಚಾಲನೆ ನೀಡಿದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಮತ್ತು ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. `ಕೆಜೆಪಿಗೆ ರಾಜ್ಯದಲ್ಲಿ ಸರ್ಕಾರ ರಚಿಸುವ ಶಕ್ತಿ ಇಲ್ಲ, ರಚನೆಯಾಗುವ ಸರ್ಕಾರದ ಭಾಗವಾಗುವ ಸಾಮರ್ಥ್ಯವೂ ಇಲ್ಲ' ಎಂದು ಹೇಳಿದರು.

ಮಲ್ಲೇಶ್ವರದ ಆಟದ ಮೈದಾನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಷ್ಮಾ, `ಕೆಜೆಪಿಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಿರುವ ಜೆಡಿಎಸ್, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿತ್ತು. ಆದರೆ ಜೆಡಿಎಸ್ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ವಚನಭ್ರಷ್ಟ ಪಕ್ಷಕ್ಕೆ ಮತ ಏಕೆ ನೀಡುತ್ತೀರಿ?' ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ದೇಶದ ಅರ್ಥವ್ಯವಸ್ಥೆ ಸಮಸ್ಯೆಗಳಿಂದ ತೊಳಲಾಡುತ್ತಿದ್ದರೂ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅನ್ಯ ಕಾರ್ಯಗಳಲ್ಲಿ ಮಗ್ನವಾಗಿದೆ. ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ತಾನು ಸೃಷ್ಟಿಸಿದ ದಾಖಲೆಗಳನ್ನು ತಾನೇ ಮುರಿದುಕೊಳ್ಳುತ್ತಿದೆ. ರಾಜ್ಯದ ಕಾಂಗ್ರೆಸ್ ಮುಖಂಡರು ತಮ್ಮದೇ ಪಕ್ಷದ ಇನ್ನೊಬ್ಬ ಮುಖಂಡನ ಕತ್ತು ಕುಯ್ಯಲು ಹವಣಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

`ದಕ್ಷಿಣ ಭಾರತದಲ್ಲಿ ರಚನೆಯಾದ ಮೊದಲ ಬಿಜೆಪಿ ಸರ್ಕಾರದಲ್ಲಿ ನಡೆದ ಕೆಲವು ಘಟನೆಗಳು ಬೇಸರ ತರಿಸಿದ್ದು ನಿಜ. ಆದರೆ ಭ್ರಷ್ಟಾಚಾರಕ್ಕೆ ಕಾರಣರಾದವರು ಈಗ ಪಕ್ಷದಿಂದ ಹೊರ ನಡೆದಿದ್ದಾರೆ. ಡಿ.ವಿ. ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಅವರು ಜನಪರ ಆಡಳಿತ ನೀಡಿದ್ದಾರೆ' ಎನ್ನುವ ಮೂಲಕ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಕುಟುಕಿದರು.

ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಘಟಕವೊಂದನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವುದು ಎಂಬ ಹೇಳಿಕೆ ಕೇಂದ್ರದ ಕಡೆಯಿಂದ ಮೂರು ವರ್ಷಗಳ ಹಿಂದೆ ಬಂದಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದರು.

ಚುನಾವಣೆ ಹೊಸಿಲಲ್ಲಿರುವಾಗಲೂ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಿಸಲು ಆಗದ ಸ್ಥಿತಿ ಕಾಂಗ್ರೆಸ್ಸಿಗೆ ಎದುರಾಗಿದೆ. ವಿವಿಧ ಕ್ಷೇತ್ರಗಳ ಟಿಕೆಟ್ ಹಂಚಿಕೆ ಗೊಂದಲದ ಗೂಡಾಗಿದೆ ಎಂದು ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ಆರ್. ಅಶೋಕ ವ್ಯಂಗ್ಯವಾಡಿದರು. ಅಭ್ಯರ್ಥಿಗಳಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ (ಮಲ್ಲೇಶ್ವರ), ಎಸ್.ಸುರೇಶ್ ಕುಮಾರ್ (ರಾಜಾಜಿನಗರ), ಪಿ.ಸಿ. ಮೋಹನ್ (ಗಾಂಧಿನಗರ), ಬಿ.ವಿ.ಗಣೇಶ (ಚಾಮರಾಜಪೇಟೆ), ಡಿ.ವೆಂಕಟೇಶಮೂರ್ತಿ (ಶಾಂತಿನಗರ) ಹಾಗೂ ಎಸ್.ಹರೀಶ (ಮಹಾಲಕ್ಷ್ಮೀಲೇಔಟ್) ಹಾಜರಿದ್ದರು.

ಬಿಗಿ ಭದ್ರತೆ: ಇತ್ತೀಚೆಗೆ ಮಲ್ಲೇಶ್ವರದಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಆಟದ ಮೈದಾನದ ಸುತ್ತ ಅರೆ ಸೇನಾಪಡೆಯ ಯೋಧರನ್ನು ಮತ್ತು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಇಕ್ಕಟ್ಟು, ಬಿಕ್ಕಟ್ಟು, ಒಗ್ಗಟು
`ಜೆಡಿಎಸ್‌ನಲ್ಲಿ ಅಪ್ಪ- ಮಕ್ಕಳ ನಡುವೆ ಇಕ್ಕಟ್ಟು, ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಮತ್ತು ಬಿಜೆಪಿಯಲ್ಲಿ ಒಗ್ಗಟ್ಟು... ಇದು ರಾಜ್ಯದ ಪ್ರಸ್ತುತ ರಾಜಕೀಯ ಸ್ಥಿತಿ'.
- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.