ADVERTISEMENT

ರಾಜ್ಯಪಾಲರ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:30 IST
Last Updated 7 ಫೆಬ್ರುವರಿ 2011, 19:30 IST


ಬೆಂಗಳೂರು: ಸಂಶೋಧಕ ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳ ನೂರಾರು ಕಾರ್ಯಕರ್ತರು ರಾಜಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಬ್ಯಾರಿಕೇಡ್ ಹಾರಲು ಯತ್ನಿಸಿದ ನೂರಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಅನಂತರ ಬಿಡುಗಡೆ ಮಾಡಿದರು.ಪ್ರತಿಭಟನೆ ನಡೆಯುತ್ತಿದ್ದಂತೆಯೇ ರಾಜ್ಯಪಾಲರು ಚಿದಾನಂದ ಮೂರ್ತಿ ಅವರಿಗೆ ಡಾಕ್ಟರೇಟ್ ನೀಡಲು ಒಪ್ಪಿಗೆ ಸೂಚಿಸಿದ್ದು ಕಾಕತಾಳೀಯವಾಗಿತ್ತು.ಚಿದಾನಂದ ಮೂರ್ತಿ ಅವರು ಹಿರಿಯ ಸಂಶೋಧಕರಾಗಿದ್ದು, ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತಹ ವ್ಯಕ್ತಿಗೆ ಡಾಕ್ಟರೇಟ್ ನೀಡಲು ನಿರಾಕರಿಸುವ ಮೂಲಕ ರಾಜ್ಯಪಾಲರು ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಇಂತಹ ವರ್ತನೆಗಳನ್ನು ಅವರು ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಬೆಂಗಳೂರು ವಿಶ್ವವಿದ್ಯಾಲಯ ಚಿದಾನಂದ ಮೂರ್ತಿ ಅವರ ಹೆಸರನ್ನು ಡಾಕ್ಟರೇಟ್‌ಗೆ ಶಿಫಾರಸು ಮಾಡಿತ್ತು, ಆದರೆ ಅದನ್ನು ತಾತ್ಕಾಲಿಕವಾಗಿ ತಡೆ ಹಿಡಿದ ರಾಜ್ಯಪಾಲರು ನೀಡಿದ ಕಾರಣ ಸಮರ್ಥನೀಯವಲ್ಲ. ಈ ರೀತಿ ಮಾಡುವ ಮೂಲಕ ಅವರು ಚಿದಾನಂದ ಮೂರ್ತಿ ಅವರನ್ನು ಅವಮಾನಿಸಿದ್ದಾರೆ’ ಎಂದು ಒಕ್ಕಲಿಗರ ಯುವ ವೇದಿಕೆ ಉಪಾಧ್ಯಕ್ಷ ವಿಶ್ವನಾಥಗೌಡ ದೂರಿದರು.‘ಈ ಹಿಂದೆ ಸಹ ರಾಜ್ಯಪಾಲರು ವಿವಾದಕ್ಕೆ ಎಡೆ ಮಾಡಿಕೊಡುವಂತಹ ನಿರ್ಧಾರಗಳನ್ನು ಕೈಗೊಂಡಿದ್ದರು. ರಾಜ್ಯಪಾಲರು ಈ ರೀತಿಯ ವರ್ತನೆ ಬಿಟ್ಟು ಹುದ್ದೆಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.