ADVERTISEMENT

ರಾಜ್ಯ ಬಜೆಟ್:ಎಸ್‌ಯುಸಿಐ ಲೇವಡಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2012, 19:30 IST
Last Updated 24 ಮಾರ್ಚ್ 2012, 19:30 IST

ಬೆಂಗಳೂರು: `ಎಲ್ಲ ರಾಜಕೀಯ ಗೊಂದಲಗಳ ನಡುವೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಮಂಡಿಸಿದ ಬಜೆಟ್ ಒಂದು ಲಕ್ಷ ಕೋಟಿ ಮುಟ್ಟಿದೆ ಎಂಬುದು ಮಾತ್ರವೇ ಅದರ ಹೆಗ್ಗಳಿಕೆ~ ಎಂದು `ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ~ (ಕಮ್ಯೂನಿಸ್ಟ್) (ಎಸ್‌ಯುಸಿಐ) ಪಕ್ಷವು ಹೇಳಿದೆ.

`ರೂ 19,000 ಕೋಟಿಗಳ ಪ್ರತ್ಯೇಕ ಕೃಷಿ ಬಜೆಟನ್ನು ಮಂಡಿಸಿದ್ದು, ಇದು ಮುಖ್ಯ ಬಜೆಟಿನಲ್ಲಿ ಬರುವ ಕೃಷಿ ಮತ್ತು ಸಂಬಂಧಿ ವಿಭಾಗಗಳ ಆಯವ್ಯಯದ ವಿಸ್ತೃತ ವಿವರಣೆಯಷ್ಟೇ ಆಗಿದೆ. ಕಳೆದ ವರ್ಷ ಬಿಜೆಪಿ ಸರ್ಕಾರ ಪ್ರಪ್ರಥಮ ಬಾರಿಗೆ ರೂ 17,000 ಕೋಟಿಗಳ ಕೃಷಿ ಬಜೆಟನ್ನು ಮಂಡಿಸಿದ ಬಗೆಗೆ ಪ್ರತಿನಿತ್ಯ ಕೊಚ್ಚಿಕೊಂಡರೂ, ಕೃಷಿ ಕ್ಷೇತ್ರದ ಬೆಳವಣಿಗೆ ದರವು ಶೇ 2.9 ರಷ್ಟು ಕುಂಠಿತವಾಗಿರುವುದು, ಈ ಬಜೆಟಿನ ನೈಜ ಬಣ್ಣವನ್ನು ತೋರಿಸುತ್ತದೆ~ ಎಂದು ಎಸ್‌ಯುಸಿಐ ಲೇವಡಿ ಮಾಡಿದೆ.

`ಶಿಕ್ಷಣಕ್ಕೆ ನೀಡಿರುವ ರೂ 15,000 ಕೋಟಿಯಲ್ಲಿ ಬಹುಪಾಲು ಶಿಕ್ಷಕರ ಸಂಬಳದ ವೆಚ್ಚಕ್ಕೆ ಹೋಗಲಿದೆ. ಇನ್ನು ಉಳಿದಂತೆ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು  ರಚನಾತ್ಮಕ  ಸುಧಾರಣೆಯ ಮೂಲಕ ನಾಶಗೊಳಿಸುವ ಸರ್ವಶಿಕ್ಷ ಅಭಿಯಾನ ಮತ್ತು ಮಾಧ್ಯಮಿಕ ಶಿಕ್ಷಾ ಅಭಿಯಾನಗಳಿಗೆ ವಿಶ್ವಬ್ಯಾಂಕ್ ಆಣತಿಯಂತೆ ಹಣ ಪೋಲು ಮಾಡಲಾಗುತ್ತಿದೆ.

ಶಿಕ್ಷಣದ ಖಾಸಗೀಕರಣ- ವ್ಯಾಪಾರೀಕರಣಗಳನ್ನು ತೊಡೆದುಹಾಕುವಂತಹ ಯಾವುದೇ ಕ್ರಮಗಳನ್ನು ಘೋಷಿಸಿಲ್ಲ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಹೆಚ್ಚಿಸುವಂತಹ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಂತಹ ಯಾವುದೇ ಯೋಜನೆಗಳು ಈ ಬಜೆಟಿನಲ್ಲಿ ಇಲ್ಲ~ ಎಂದು ಪಕ್ಷವು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.