ADVERTISEMENT

ರಾಜ್ಯ ಸರ್ಕಾರದಲ್ಲಿ 1.7 ಲಕ್ಷ ಹುದ್ದೆ ಖಾಲಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:15 IST
Last Updated 14 ಮಾರ್ಚ್ 2011, 19:15 IST

ಬೆಂಗಳೂರು: ‘ರಾಜ್ಯ ಸರ್ಕಾರದಲ್ಲಿ ಪ್ರಸ್ತುತ 1.7 ಲಕ್ಷ ಹುದ್ದೆಗಳು ಖಾಲಿ ಇದ್ದು, ಈಗ ಕರ್ತವ್ಯದಲ್ಲಿರುವ ನೌಕರರು ಹೆಚ್ಚುವರಿಯಾಗಿ ಈ ಹುದ್ದೆಗಳ ಜವಾಬ್ದಾರಿ ನಿರ್ವಹಿಸುವ ಸ್ಥಿತಿ ಇದೆ. ಕಾರ್ಯದ ಒತ್ತಡದಿಂದಾಗಿ ನೌಕರರು ದಕ್ಷತೆ ಕಳೆದುಕೊಳ್ಳುತ್ತಿರುವುದರಿಂದ ಸರ್ಕಾರ ಖಾಲಿ ಇರುವ ಅಷ್ಟೂ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್.ಬೈರಪ್ಪ ಒತ್ತಾಯಿಸಿದರು.

ಖಾಲಿ ಹುದ್ದೆಗಳಿಂದ ಆಡಳಿತಾತ್ಮಕ ಸಮಸ್ಯೆಗಳೂ ಉಂಟಾಗುತ್ತಿವೆ. ಅಲ್ಲದೇ ಪ್ರಸ್ತುತ ಸೇವೆಯಲ್ಲಿರುವ ನೌಕರರ ಮೇಲಿನ ಕಾರ್ಯಭಾರವನ್ನು ತಗ್ಗಿಸಲು ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದರು.ಬೇಸಿಗೆ ಕಾಲ ಆರಂಭವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ ಗುಲ್ಬರ್ಗ ಮತ್ತು ಬೆಳಗಾವಿ ವಿಭಾಗದಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ನಿಗದಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಬೇಕು. ಇತರ ಜಿಲ್ಲಾ ಕೇಂದ್ರಗಳಿಗೆ ನೀಡುವ ಮಾದರಿಯಲ್ಲೇ ನೂತನ ಜಿಲ್ಲಾ ಕೇಂದ್ರಗಳಲ್ಲಿರುವವರಿಗೆ ಭತ್ಯೆಯನ್ನು ಪರಿಷ್ಕರಿಸಬೇಕು. ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಬೇಡಿಕೆಯನ್ನು ಶೀಘ್ರವೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ವೇತನ ಸಮಿತಿ ರಚನೆಯ ಘೋಷಣೆಯನ್ನು ಸ್ವಾಗತಿಸಿದ ಅವರು, ಕೇಂದ್ರ ಸರ್ಕಾರದ 6ನೇ ವೇತನ ಆಯೋಗದ ಶಿಫಾರಸುಗಳನ್ನು ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ಜಾರಿಗೊಳಿಸಿವೆ. ಏಪ್ರಿಲ್ 2006ರಿಂದ ಇಲ್ಲಿಯವರೆಗೆ ಅನ್ವಯವಾಗುವಂತೆ ಶೀಘ್ರವೇ ವೇತನ ಸಮಿತಿರಚನೆಗೆ ಆದೇಶ ಹೊರಡಿಸುವ ಮೂಲಕ ಸಮಿತಿಯ ಕಾರ್ಯಾರಂಭಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.