ADVERTISEMENT

ರಾಮಾಯಣ ಪಠ್ಯದಲ್ಲಿ ಸೇರಿಸಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2013, 20:15 IST
Last Updated 19 ಫೆಬ್ರುವರಿ 2013, 20:15 IST
ರಂಗಕಹಳೆ ಸಂಸ್ಥೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ  `ಮಕ್ಕಳ ರಾಮಾಯಣ ಚೌಪದಿ ಮಹಾಕಾವ್ಯ'ವನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಬಿಡುಗಡೆಗೊಳಿಸಿ ಕೃತಿಯ ಲೇಖಕ ಗೋಪಾಲಕೃಷ್ಣ ಭಟ್ ಅವರಿಗೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್, ಸಾಹಿತಿ ಎಸ್.ಎಲ್.ಭೈರಪ್ಪ, ಸಂಸದ ಡಿ.ಬಿ.ಚಂದ್ರೇಗೌಡ ಚಿತ್ರದಲ್ಲಿದ್ದಾರೆ	-ಪ್ರಜಾವಾಣಿ ಚಿತ್ರ
ರಂಗಕಹಳೆ ಸಂಸ್ಥೆಯು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ `ಮಕ್ಕಳ ರಾಮಾಯಣ ಚೌಪದಿ ಮಹಾಕಾವ್ಯ'ವನ್ನು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಬಿಡುಗಡೆಗೊಳಿಸಿ ಕೃತಿಯ ಲೇಖಕ ಗೋಪಾಲಕೃಷ್ಣ ಭಟ್ ಅವರಿಗೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್, ಸಾಹಿತಿ ಎಸ್.ಎಲ್.ಭೈರಪ್ಪ, ಸಂಸದ ಡಿ.ಬಿ.ಚಂದ್ರೇಗೌಡ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಮಾಯಣವನ್ನು ಪಠ್ಯಕ್ರಮವನ್ನಾಗಿ ಜಾರಿಗೊಳಿಸಬೇಕು ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಆಗ್ರಹಿಸಿದರು.

ರಂಗಕಹಳೆ ಸಂಸ್ಥೆಯು ನಗರದ ಸಂಸ ಬಯಲು ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ `ವಿದ್ವಾನ್ ಮಧುರಕಾನನ ಗೋಪಾಲಕೃಷ್ಣ ಭಟ್ ಅವರ ರಚಿತ ಮಕ್ಕಳ ರಾಮಾಯಣ ಚೌಪದಿ ಮಹಾಕಾವ್ಯ' ದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ರಾಮಾಯಣವನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕು ಎಂದರೆ ನಮ್ಮದು ಸಮಾಜವಾದದ ಸಿದ್ಧಾಂತದ ಮೇಲೆ ರಚಿತವಾದ ದೇಶ. ಇಲ್ಲಿ ರಾಮಾಯಣವನ್ನು ಕಡ್ಡಾಯಗೊಳಿಸಿದರೆ ಅದು ಕೋಮುವಾದಕ್ಕೆ ಒತ್ತು ನೀಡುತ್ತದೆ ಎಂದು ಕೆಲ ಜನರು ಹೇಳಬಹುದು. ಅದನ್ನು ಕೇಳಿ ಸರ್ಕಾರವು ಸಹ ಯಾವುದೇ ಕ್ರಮ ತೆಗೆದುಕೊಳ್ಳದೆ ಸುಮ್ಮನಾಗುತ್ತದೆ' ಎಂದು ವಿಷಾದದಿಂದ ನುಡಿದರು.

ರಾಮಾಯಣವನ್ನು ಕಡ್ಡಾಯಗೊಳಿಸಲು ಕಷ್ಟ ನಷ್ಟಗಳೇನು ಎಂಬುದನ್ನು ವಿಶ್ಲೇಷಣೆ ಮಾಡುವುದು ಬೇಡ. ಆದರೆ, ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ರಾಮಾಯಣವನ್ನು ಓದಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು. ಇದರಿಂದ ಅವರಲ್ಲಿ ಒಂದು ಶಿಸ್ತು ಬೆಳೆಯಲು ಸಾಧ್ಯವಾಗುತ್ತದೆ. ದೊಡ್ಡವರಿಗೆ ಮತ್ತು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ರಾಮಾಯಣವು ರಚನೆಯಾಗಬೇಕು ಎಂದು ಹೇಳಿದರು.

ದೆಹಲಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಮರಣದಂಡನೆ ನೀಡಬೇಕು ಎಂದು ಹೋರಾಟ ನಡೆಸಿದರು. ಆದರೆ, ಮರಣದಂಡನೆ ನೀಡಿದರೆ ಯಾವುದೇ ಅತ್ಯಾಚಾರ ಅಥವಾ ಅಪರಾಧಗಳು ನಿಲ್ಲುವುದಿಲ್ಲ. ಬದಲಿಗೆ ಮಕ್ಕಳಿರುವಾಗಲೇ ಅವರಿಗೆ ಒಳ್ಳೆಯ ಶಿಸ್ತು ಮತ್ತು ಸಂಸ್ಕಾರವನ್ನು ನೀಡಬೇಕು. ಆಗ ಅವರು ದೇಶದ ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದರು.

ಅನೇಕ ಸ್ತ್ರೀವಾದಿಗಳು ಶ್ರೀರಾಮ ಸೀತೆಯನ್ನು ಪರಿತ್ಯಾಗ ಮಾಡಿದ್ದನ್ನು ವಿವರಿಸಿ ಶ್ರೀರಾಮ ಸ್ತ್ರೀ ವಿರೋಧಿಯೆಂದು ಬಿಂಬಿಸುತ್ತಾರೆ. ಆದರೆ, ಅವನು ಸೀತೆಯನ್ನು ಪರಿತ್ಯಾಗ ಮಾಡುವಾಗ ಮನಸ್ಸಿನ ಸ್ಥಿತಿ ಹೇಗಿತ್ತು ಎಂಬುದು ಯಾರಿಗೂ ತಿಳಿದಿಲ್ಲ. ಶ್ರೀರಾಮ ಆ ಸಂದರ್ಭದಲ್ಲಿ ಅತ್ತಿದ್ದಾನೆ. ಮಾನಸಿಕ ಕ್ಷೋಭೆ ಅನುಭವಿಸಿದ್ದಾನೆ. ಕೊನೆಗೆ ಲಕ್ಷ್ಮಣನಿಗೆ ಸೀತೆಯನ್ನು ವಾಲ್ಮೀಕಿ ಆಶ್ರಮದ ಹತ್ತಿರ ಬಿಟ್ಟು ಬಾ ಎಂದು ಹೇಳಿದನೇ ಹೊರತು ಎಲ್ಲಾದರೂ ಕಾಡಿಗೆ ಬಿಟ್ಟು ಬಾ ಎಂದಲ್ಲ. ಈ ಕುರಿತು ಮೂಲ ರಾಮಾಯಣದಲ್ಲಿ ಉಲ್ಲೇಖವಿದೆ ಎಂದು ವಿಶ್ಲೇಷಣೆ ಮಾಡಿದರು.

ವಾಲ್ಮೀಕಿ ಬರೆದ ರಾಮಾಯಣದಲ್ಲಿ ಜೀವನ ದರ್ಶನವಿದೆ. ವ್ಯಾಸ ಬರೆದ ಮಹಾಭಾರತದಲ್ಲಿ ಜೀವನ ಸಂಘರ್ಷವಿದೆ. ಇವೆರಡರಿಂದ ಭಾರತೀಯ ಸಂಸ್ಕೃತಿ ಶ್ರೀಮಂತವಾಗಿದೆ. ಇವರಿಬ್ಬರೂ ಮೊದಲು ಋಷಿಗಳು ಆ ನಂತರ ಕವಿಗಳು ಆದ್ದರಿಂದ ಇವರು ಸೌಂದರ್ಯದ ಸೃಷ್ಟಿಗಾಗಿಯೇ ಬರೆದಿಲ್ಲ ಎಂದರು.

ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ  ್ಙ 269 ಕೋಟಿ ಹಣವನ್ನು ನೀಡಿದ್ದರೂ ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿಲ್ಲ. ಹಣದ ವಿಂಗಡಣೆ ಸರಿಯಾಗಿಲ್ಲ ಎಂಬ ವಿವರಣೆಯನ್ನು ನೀಡಬೇಕಾಗಿಲ್ಲ. ಅದು ಅವರದೇ ಸಮಸ್ಯೆ, ಅವರೇ ಸರಿಯಾಗಿ ನಿಭಾಯಿಸಬೇಕು. ಸಚಿವ ಗೋವಿಂದ ಎಂ.ಕಾರಜೋಳ ಅವರು ಕಾರ್ಯಕ್ರಮಕ್ಕೆ ಬರಬೇಕಾಗಿತ್ತು ಆದರೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.