ADVERTISEMENT

ರಿಯಾಯಿತಿ ಕನ್ನಡ ಪುಸ್ತಕ ಮೇಳ ಆರಂಭ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST
ರಿಯಾಯಿತಿ ಕನ್ನಡ ಪುಸ್ತಕ ಮೇಳ ಆರಂಭ
ರಿಯಾಯಿತಿ ಕನ್ನಡ ಪುಸ್ತಕ ಮೇಳ ಆರಂಭ   

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಆಯೋಜಿಸಿರುವ `ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮೇಳ~ಕ್ಕೆ ಗುರುವಾರ ಚಾಲನೆ ದೊರೆಯಿತು. ಇದೇ 8ರವರೆಗೆ ಮೇಳ ನಡೆಯಲಿದ್ದು, ಕನಿಷ್ಠ ಶೇ 25ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕಗಳು ದೊರೆಯಲಿವೆ.

ಕನ್ನಡ ಪುಸ್ತಕ ಪ್ರಾಧಿಕಾರ, ನಾಟಕ ಅಕಾಡೆಮಿ, ಸಂಗೀತ ಮತ್ತು ನೃತ್ಯ ಅಕಾಡೆಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ನವ ಕರ್ನಾಟಕ ಪ್ರಕಾಶನ, ಕೇಂದ್ರ ಸಾಹಿತ್ಯ ಅಕಾಡೆಮಿ, ಜಾನಪದ ಪರಿಷತ್ತು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ, ಅಂಕಿತ ಪುಸ್ತಕ, ಸಪ್ನ ಬುಕ್‌ಹೌಸ್ ಸೇರಿದಂತೆ ಒಟ್ಟು 70 ಪ್ರಕಾಶನ ಸಂಸ್ಥೆಗಳ 68 ಮಳಿಗೆಗಳಿವೆ.

ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬಹುಪಾಲು ಕೃತಿಗಳು ಮೇಳದಲ್ಲಿ ಲಭ್ಯವಿದೆ. ಪ್ರತಿ ಕೃತಿಯ ಮೇಲೆ ಶೇ 25ರಷ್ಟು ರಿಯಾಯಿತಿ ಇರುವುದರಿಂದ ಓದುಗರ ಆಯ್ಕೆಗೆ ಅನುಕೂಲವೆನಿಸಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಶಿವರಾಮ ಕಾರಂತರ ಕೃತಿಗಳೂ ರಿಯಾಯಿತಿ ದರದಲ್ಲಿ ದೊರೆಯುತ್ತಿವೆ. ಭಾರತೀಯ ವಿದ್ಯಾಭವನ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದಲ್ಲಿ ಪ್ರಕಟವಾಗಿರುವ `ಭವನ್ಸ್ ಬುಕ್ ಯೂನಿವರ್ಸಿಟಿ~ ಮಾಲಿಕೆಯ ಪುಸ್ತಕಗಳು ಮಾರಾಟಕ್ಕಿವೆ.

ಮೇಳವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಸಮಗ್ರ ಕೃತಿಗಳ ಸಂಪುಟಗಳನ್ನು ಪ್ರಕಟಿಸಲು ಇಲಾಖೆ ಚಿಂತಿಸಿದೆ. ಈ ಸಂಬಂಧ ಈಗಾಗಲೇ ಡಾ.ಯು.ಆರ್. ಅನಂತಮೂರ್ತಿ, ಡಾ.ಚಂದ್ರಶೇಖರ ಕಂಬಾರ ಅವರೊಂದಿಗೆ ಮಾತುಕತೆ ನಡೆಸಲಾಗಿದೆ~ ಎಂದರು.

`ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ ಆಯ್ದ ಕೃತಿಗಳನ್ನು ಪ್ರಕಟಿಸುವ ಚಿಂತನೆ ಇದೆ. ಸಾಹಿತಿಗಳು, ಕೃತಿಯ ಹಕ್ಕುಸ್ವಾಮ್ಯದಾರರು, ಪ್ರಕಾಶಕರು ಒಪ್ಪಿಗೆ ನೀಡಿದ ಕೃತಿಗಳನ್ನು ಪ್ರಕಟಿಸಲಾಗುವುದು. ಈ ಕಾರ್ಯಕ್ಕೆ ಕ್ರಿಯಾ ಯೋಜನೆಯಲ್ಲಿ ಹಣ ಕಾಯ್ದಿರಿಸಲಾಗುವುದು~ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ, `ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪುಸ್ತಕ ಮೇಳಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಮೇಳದಲ್ಲಿ ಒಟ್ಟು 68 ಮಳಿಗೆಗಳಿದ್ದು, 70 ಪ್ರಕಾಶಕರು ಪಾಲ್ಗೊಂಡಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿ.ವಿ.ಯ ಪ್ರಕಟಣೆಗಳಿಗೆ ಶೇಕಡ 50ರಷ್ಟು ರಿಯಾಯಿತಿ ದೊರೆಯಲಿದೆ~ ಎಂದರು.

ಪುಸ್ತಕ ಮೇಳವು ಇದೇ 8ರವರೆಗೆ ನಡೆಯಲಿದೆ. ಸಮಯ: ಬೆಳಿಗ್ಗೆ 10.30ರಿಂದ ರಾತ್ರಿ 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.