ADVERTISEMENT

ರೆಕ್ಟರ್‌ ಕೊಲೆ: ಪಾದ್ರಿಗಳು ಸೇರಿ ಮೂವರ ಸೆರೆ

ಹನ್ನೊಂದೂವರೆ ತಿಂಗಳ ಬಳಿಕ ಸಿಕ್ಕಿ ಬಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:29 IST
Last Updated 21 ಮಾರ್ಚ್ 2014, 19:29 IST

ಬೆಂಗಳೂರು: ಸಾರ್ವಜನಿಕವಾಗಿ ಸಂಚಲನ ಸೃಷ್ಟಿಸಿದ್ದ ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ (62) ಕೊಲೆ ಪ್ರಕರಣ ಸಂಬಂಧ ಚರ್ಚ್‌ಗಳ ಫಾದರ್‌ಗಳು ಸೇರಿದಂತೆ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಸಾಕಷ್ಟು ಕಗ್ಗಂಟಾಗಿದ್ದ ಈ ಪ್ರಕರಣ­ವನ್ನು ಕೊಲೆ ನಡೆದ ಹನ್ನೊಂದೂವರೆ ತಿಂಗಳ ಬಳಿಕ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
‘ಗುಲ್ಬರ್ಗದ ನವಚೇತನ ಚರ್ಚ್‌ನ ಫಾದರ್ ಇಲಿಯಾಸ್ (44), ಕೆಂಗೇರಿಯ ಸಂತ ಫ್ರಾನ್ಸಿಸ್‌ ಚರ್ಚ್‌ನ ಫಾದರ್‌ ವಿಲಿಯಂ ಪ್ಯಾಟ್ರಿಕ್‌ (45) ಮತ್ತು ಅವರ ಸಹಚರ ಪೀಟರ್‌ (22) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ತಿಳಿಸಿದರು.

‘ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಫಾದರ್‌ಗಳನ್ನು ಕಡೆಗಣಿಸಿ, ಸೆಮಿನರಿಯ ಪ್ರಮುಖ ಹುದ್ದೆಗಳನ್ನು ಕೆಲವರಿಗೆ ಮಾತ್ರ ನೀಡಲಾಗಿದೆ ಎಂಬ ಕಾರಣಕ್ಕೆ ಥಾಮಸ್‌ ಅವರ ಕಾರ್ಯವೈಖರಿ ಬಗ್ಗೆ ಫಾದರ್ ಇಲಿಯಾಸ್ ಹಾಗೂ ಇತರರಿಗೆ ಅಸಮಾಧಾನವಿತ್ತು. ಇದರಿಂದ ಕೋಪಗೊಂಡ ಆರೋಪಿಗಳು, ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಸೆಮಿನರಿಯಲ್ಲಿದ್ದ ದಾಖಲೆ ಪತ್ರಗಳನ್ನು ಕಳವು ಮಾಡಲು ನಿರ್ಧರಿಸಿದ್ದರು’ ಎಂದು ಹೇಳಿದರು.

‘ಸಂಚಿನಂತೆ 2013ರ ಮಾ.31ರ ರಾತ್ರಿ ಮಾರಕಾಸ್ತ್ರಗಳೊಂದಿಗೆ ಸೆಮಿನರಿಗೆ ಬಂದ ಆರೋಪಿಗಳು, ದಾಖಲೆ ಪತ್ರಗಳ ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ ಥಾಮಸ್‌ ಅವರು ಎಚ್ಚರ­ಗೊಂಡು ಸ್ಥಳಕ್ಕೆ ಬಂದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಸಂಬಂಧಪಟ್ಟ ದಾಖಲೆಗಳ ಜತೆ ಪರಾರಿಯಾಗಿದ್ದರು’ ಎಂದು ಮಾಹಿತಿ ನೀಡಿದರು.

‘ವೈಯಕ್ತಿಕ ದ್ವೇಷ, ಕೌಟುಂಬಿಕ ಕಲಹ, ಆಡಳಿತಾತ್ಮಕ ವಿಷಯ ಹೀಗೆ ಎಲ್ಲ ಆಯಾಮ­ಗಳಿಂದಲೂ ಪ್ರಕರಣದ ತನಿಖೆ ನಡೆಸಲಾಯಿತು. ಘಟನೆ ನಡೆಯುವ ಮೊದಲು ಹಾಗೂ ನಂತರದ ದಿನಗಳಲ್ಲಿ ಸೆಮಿನರಿಗೆ ಬಂದು ಹೋಗಿರುವ ಕರೆಗಳನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತು’ ಎಂದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗೋವಾ, ಮಹರಾಷ್ಟ್ರ ಹಾಗೂ ಪಾಂಡಿಚೇರಿ ರಾಜ್ಯಗಳಲ್ಲಿನ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ವಿಚಾರಣೆ ನಡೆಸಲಾಯಿತು. ಅವರ ಬೆರಳು ಮುದ್ರೆಗಳನ್ನು ಸಂಗ್ರಹಿಸಿ ಘಟನಾ ಸ್ಥಳದಲ್ಲಿ ದೊರೆತ ಬೆರಳು ಮುದ್ರೆಗಳೊಂದಿಗೆ ಹೋಲಿಕೆ ಮಾಡಿ ಪರಿಶೀಲಿಸಲಾಯಿತು. ಜತೆಗೆ ಸೆಮಿ­ನರಿಯ ಸಿಬ್ಬಂದಿ, ಸ್ಥಳೀಯರು ಸೇರಿದಂತೆ ಸುಮಾರು 2,000 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು’ ಎಂದು ಹೇಳಿದರು.

‘ತನಿಖಾ ಹಂತದಲ್ಲಿ ಕಂಡು ಬಂದ ಸಂಶಯಾಸ್ಪದ ವ್ಯಕ್ತಿಗಳ ಪೈಕಿ 10 ಮಂದಿ­ಯನ್ನು ಸುಳ್ಳು ಪತ್ತೆ (ಪಾಲಿಗ್ರಾಫ್‌) ಪರೀಕ್ಷೆಗೆ ಹಾಗೂ 5 ಮಂದಿಯನ್ನು ಅಹಮದಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾ­ಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿ ಮಂಪರು ಪರೀಕ್ಷೆ ಮಾಡಿಸ­ಲಾಯಿತು. ಆಗ ಇಲಿಯಾಸ್‌, ಪ್ಯಾಟ್ರಿಕ್ ಮತ್ತು ಪೀಟರ್‌ ಅವರ ಕೃತ್ಯ ಬಯಲಾ-­-ಯಿತು. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಔರಾದಕರ್‌ ಮಾಹಿತಿ ನೀಡಿದರು.

ಅಪಘಾತ: ಹಾಲು ವ್ಯಾಪಾರಿ ಸಾವು
ಬೆಂಗಳೂರು: ಬೇಗೂರು ಕೆರೆ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೈಕ್‌ಗೆ ಟೆಂಪೊ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಲೋಹಿತ್ (19) ಎಂಬುವರು ಮೃತಪಟ್ಟಿದ್ದು, ಅವರ ಸ್ನೇಹಿತ ಬಸವಣ್ಣ (18) ಗಾಯಗೊಂಡಿದ್ದಾರೆ.

ಚಿಕ್ಕ ಬೇಗೂರು ಗೇಟ್ ನಿವಾಸಿಯಾದ ಲೋಹಿತ್‌ ಹಾಲು ವ್ಯಾಪಾರಿ­ಯಾಗಿದ್ದರು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಸ್ನೇಹಿತನನ್ನು ಕರೆದುಕೊಂಡು ಮನೆಗಳಿಗೆ ಹಾಲು ಹಾಕಲು ಹೋಗುತ್ತಿದ್ದರು. ಈ ವೇಳೆ ಬೊಮ್ಮನಹಳ್ಳಿಯಿಂದ ಬೇಗೂರು ಗ್ರಾಮದ ಕಡೆಗೆ  ಹೊರಟಿದ್ದ ಟೆಂಪೊ ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಕೆಳಗೆ ಬಿದ್ದ ಲೋಹಿತ್‌ ಅವರ ಸೊಂಟದ ಮೇಲೆ ಟೆಂಪೊ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿ­ದ್ದಾರೆ. ಬಸವಣ್ಣ ಎಡಭಾಗಕ್ಕೆ ಉರುಳಿ­ದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪೀಟರ್‌ನ ಆಶ್ರಯದಾತ
‘ಆರೋಪಿ ಇಲಿಯಾಸ್‌, ಪೀಟರ್‌ನಿಗೆ ಬಾಲ್ಯದಿಂದಲೂ ಆಶ್ರಯ ನೀಡಿದ್ದರು. ಆತನಿಗೆ ಬಿ.ಕಾಂ ಪದವಿವರೆಗೆ ಓದಿಸಿದ್ದ ಇಲಿಯಾಸ್, ಸಂಕಷ್ಟದಲ್ಲಿ ಹಣಕಾಸಿನ ನೆರವನ್ನೂ ನೀಡಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ನಗರದ ಚರ್ಚ್‌ ಒಂದರ ಫಾದರ್‌ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಪೀಟರ್‌, ಆಶ್ರಯದಾತನ ಸೂಚನೆಯಂತೆ ಕೃತ್ಯಕ್ಕೆ ಕೈಜೋಡಿಸಿದ್ದ. ಸಂಶಯದ ಆಧಾರದ ಮೇಲೆ ಹಲವರ ಮೊಬೈಲ್‌ ಕರೆಗಳನ್ನು ಪರಿಶೀಲಿಸಿ­ದಾಗ ಘಟನಾ ದಿನ ಪೀಟರ್‌ ಸಹ ಥಾಮಸ್‌ ಅವರ ಚರ್ಚ್‌ಗೆ ಹೋಗಿದ್ದ ಸಂಗತಿ ಗೊತ್ತಾಯಿತು. ಆತನನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ವರ್ಗಾವಣೆ ನಂತರ ದ್ವೇಷ ಹೆಚ್ಚಿತು
‘ಮೂಲತಃ ಮಂಡ್ಯದ ಇಲಿಯಾಸ್,  ನಗರದ ವಿವಿಧ ಚರ್ಚ್‌ಗಳಲ್ಲಿ ಈ ಹಿಂದೆ ಫಾದರ್‌ ಆಗಿ ಕೆಲಸ ಮಾಡಿದ್ದರು. ಕನ್ನಡ ಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದ  ಅವರನ್ನು ಆರ್ಚ್‌ ಬಿಷಪ್‌ ಅವರು ಎರಡು ವರ್ಷಗಳ ಹಿಂದೆ ಗುಲ್ಬರ್ಗದ ನವಚೇತನ ಚರ್ಚ್‌ಗೆ ವರ್ಗಾ­ವಣೆ ಮಾಡಿದ್ದರು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮೊದಲಿನಿಂದಲೂ ಥಾಮಸ್‌ ಅವರ ಆಡ­ಳಿತ ವೈಖರಿಯನ್ನು ದ್ವೇಷಿಸುತ್ತಿದ್ದ ಇಲಿಯಾಸ್, ವರ್ಗಾವಣೆ ನಂತರ ಥಾಮಸ್‌ ಅವರನ್ನು ಮತ್ತಷ್ಟು ದ್ವೇಷಿಸಲಾರಂಭಿಸಿದ್ದರು. ಕೊಲೆ ಮಾಡಿ ದಾಖಲೆಪತ್ರಗಳನ್ನು ಕಳವು ಮಾಡಲು ಸಂಚು ರೂಪಿಸಿ ಕೃತ್ಯಕ್ಕೆ ಪ್ಯಾಟ್ರಿಕ್‌ನ ನೆರವು ಕೇಳಿದರು. ಜತೆಗೆ ತಾನೇ ಸಾಕಿ ಬೆಳೆಸಿದ ಪೀಟರ್‌ನನ್ನು ಕೃತ್ಯದಲ್ಲಿ ತೊಡಗಿಸಿಕೊಂಡರು ಎಂದು ಹೇಳಿದ್ದಾರೆ.

ಐದು ಮಂದಿಯಿಂದ ಕೃತ್ಯ: ಬಂಧಿತರು ಸೇರಿ ಒಟ್ಟು ಐದು ಮಂದಿ ಥಾಮಸ್‌ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಉಳಿದಿಬ್ಬರ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೇ, ಕೃತ್ಯದ ಹಿಂದೆ ಇನ್ನೂ ಎಂಟು ಮಂದಿಯ ಕೈವಾಡವಿ­ರುವ ಶಂಕೆ ಇದೆ. ಈ ಬಗ್ಗೆಯೂ ತನಿಖೆ ನಡೆಸ­ಲಾಗುತ್ತಿದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.