ADVERTISEMENT

ರೇಣುಕಾಚಾರ್ಯ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ಬೆಂಗಳೂರು: ಅಕ್ರಮ ಮದ್ಯ ದಾಸ್ತಾನು ಆರೋಪಕ್ಕೆ ಗುರಿಯಾಗಿರುವ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಸೊಮವಾರ ನಗರದ ಆನಂದ್ ರಾವ್ ವೃತ್ತದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು.

ಸಚಿವ ರೇಣುಕಾಚಾರ್ಯ ಅವರ ಮುಖವಾಡ ಧರಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಅಕ್ರಮ ಮದ್ಯ ದಾಸ್ತಾನಿನಲ್ಲಿ ಅಬಕಾರಿ ಸಚಿವರ ನೇರ ಪಾತ್ರವಿರುವುದು ಈಗಾಗಲೇ ಸಾಬೀತಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು ನೀಡಿರುವ ಹೇಳಿಕೆಗಳೂ ಸಚಿವರ ತಪ್ಪನ್ನು ಎತ್ತಿ ತೋರುತ್ತಿವೆ. ಇಷ್ಟು ದಿನ ರೆಸಾರ್ಟ್ ರಾಜಕಾರಣದಲ್ಲಿ ತೊಡಗಿದ್ದ ಸಚಿವರು ಈಗ ಮದ್ಯದ ಹಗರಣದಲ್ಲಿ ಮುಳುಗಿದ್ದಾರೆ.

ರಾಜ್ಯದ ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸದ ಸಚಿವರು ಹಗರಣಗಳಲ್ಲಿಯೇ ತಮ್ಮ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಲೆ ಬಾಳುವ ವಿದೇಶಿ ಮದ್ಯಗಳನ್ನು ದಾಸ್ತಾನು ಮಾಡುವ ಮೂಲಕ ಬಿಜೆಪಿ ಸರ್ಕಾರದ ಸಚಿವರು ತಮ್ಮ ನಿರ್ಲಜ್ಜೆಯನ್ನು ಮೆರೆದಿದ್ದಾರೆ. ಹಗರಣಗಳ ಆರೋಪವಿರುವ ಸಚಿವರನ್ನು ಕೂಡಲೇ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ಕೈಬಿಟ್ಟು, ಶಾಸಕರ ಸ್ಥಾನದಿಂದಲೂ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಟಿ.ಆರ್.ಶ್ರೀನಿವಾಸ್,ಎಸ್.ಮನೋಹರ್, ಡಿ.ಎ.ಪ್ರಮೋದ್ ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.