ADVERTISEMENT

ರೈತನಿಗೆ ಸಮಾಜದಲ್ಲಿ ಭದ್ರತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಬೆಂಗಳೂರು: `ದೇಶಕ್ಕೆ ಅನ್ನದಾನ ಮಾಡುವ ರೈತನಿಗೆ ಸಮಾಜದಲ್ಲಿ ಭದ್ರತೆ ಇಲ್ಲವಾಗಿದೆ. ಯಾರಲ್ಲೂ ಎಂದೂ ಬೇಡದ ರೈತನಿಗೆ ಅನ್ಯರನ್ನು ಬೇಡುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ ವಿಷಾದಿಸಿದರು.

ಭಾರತೀಯ ಒಕ್ಕಲಿಗರ ಒಕ್ಕೂಟ ಪುರಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 500ನೇ ಜಯಂತಿ ಹಾಗೂ `ಕೆಂಪೇಗೌಡ ಶ್ರೀ~ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ರೈತ ಇಡೀ ರಾಷ್ಟ್ರಕ್ಕೆ ನಾಯಕನಿದ್ದಂತೆ. ತಾನು ಬೆಳೆದ ಸಂಪತ್ತನ್ನು ಒಬ್ಬನೇ ತಿನ್ನದೆ ಜಗತ್ತಿಗೆಲ್ಲಾ ಹಂಚುತ್ತಿದ್ದ. ಆದರೆ ಸಾಲದ ಸುಳಿಯಲ್ಲಿ ಸಿಲುಕಿ ಶೋಚನೀಯ ಸ್ಥಿತಿಯಲ್ಲಿದ್ದಾನೆ. ಒಡೆಯನಾಗಿದ್ದವ ಬೇಡುವ ಸ್ಥಿತಿ ತಲುಪಿದ್ದಾನೆ~ ಎಂದು ಆತಂಕ ವ್ಯಕ್ತಪಡಿಸಿದರು.

`ಒಕ್ಕಲಿಗ ಸಮುದಾಯದಲ್ಲಿ ಸಂಘಟನೆ ಕಡಿಮೆಯಾಗುತ್ತಿದೆ. ಬೇರೆ ಬೇರೆ ಸಮುದಾಯಗಳು ಹೇಗೆ ಸಮಾಜದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರು, ಹಾಗೇ ನಾವು ಕೂಡ ಒಗ್ಗೂಡಿ ಶಕ್ತಿ ಪ್ರದರ್ಶಿಸಬೇಕು~ ಎಂದು ಕರೆ ನೀಡಿದರು.

ನಂತರ ಮಾತನಾಡಿದ ಶಾಸಕ ಡಿ.ಕೆ.ಶಿವಕುಮಾರ್ `ಒಕ್ಕಲಿಗ ಸಮದಾಯದ ಜನ ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ನಮ್ಮದೇ ಜನಾಂಗದವರಾದ ಕೆಂಗಲ್ ಹನುಮಂತಯ್ಯ, ಕೆಂಪೇಗೌಡ ಅವರು ಸಮಾಜದ ಅಭಿವೃದ್ಧಿಗೆ ನೀಡಿರುವ  ಕೊಡುಗೆ ಮರೆಯಲಾಗದು~ ಎಂದು ಪ್ರಶಂಸಿದರು.

`ಮಹನೀಯರ ಜಯಂತಿಗಳನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರು ನಿರ್ಮಾಣಕ್ಕೆ ಅಂದಿನ ಕಾಲದಲ್ಲೇ ತ್ಯಾಗ ಮಾಡಿದ  ಕೆಂಪೇಗೌಡರ ಹೆಸರಿನಲ್ಲಿ ಸರ್ಕಾರ ಯಾವುದೇ ಯೋಜನೆ ಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿ~ ಎಂದರು.

ರಾಮಚಂದ್ರಪ್ಪ ಹರಕೆಯ ಕುರಿ: ಬಿಜೆಪಿ ಸರ್ಕಾರದಲ್ಲಿ ಯಾರು ಭ್ರಷ್ಟರಿಲ್ಲ ಹೇಳಿ?. ಎಲ್ಲರೂ ಭ್ರಷ್ಟರೇ. ಭ್ರಷ್ಟಾಚಾರದ ಹೊಣೆ ಹೊತ್ತವರೆಲ್ಲಾ ರಾಜೀನಾಮೆ ನೀಡಿದ್ದಾರೆಯೇ?. ಆದರೆ ಪಕ್ಷದಲ್ಲಿ ರಾಮಚಂದ್ರಪ್ಪ ಹರಕೆಯ ಕುರಿಯಾಗಿದ್ದಾರೆ. ಇಂತಹ ಸ್ಥಿತಿ ಅವರಿಗೆ ಬರಬಾರದಿತ್ತು~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕೆಂಪೇಗೌಡ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆದಿಚುಂಚನಗಿರಿ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಭಾರತೀಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಜಿ.ಎಚ್.ಹಾಲಪ್ಪ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಿ.ಸಿ.ಕೆ.ಕಾಳೇಗೌಡಇತರರು ಉಪಸ್ಥಿತರಿದ್ದರು.

 ರಾಜಕೀಯ ಶಾಲೆ ಪ್ರಾರಂಭಿಸುವೆ...
`ಇಂದಿನ ರಾಜಕೀಯಕ್ಕೆ ಯುವಕರ ಅಗತ್ಯವಿದೆ. ಈಗಾಗಲೇ ರಾಜಕೀಯದಿಂದ ಬೇಸತ್ತು ಹೋಗಿದ್ದೇನೆ. ನಾಯಕನಾದವನು ಹಿಂಬಾಲಕರನ್ನು ತಯಾರು ಮಾಡಬಾರದು. ನಾಯಕರನ್ನೇ ತಯಾರು ಮಾಡಬೇಕು. ಈ ನಿಟ್ಟಿನಲ್ಲಿ ಉತ್ತಮ ನಾಯಕರನ್ನು ರಾಜಕೀಯಕ್ಕೆ ನೀಡುವ ಸಲುವಾಗಿ ರಾಜಕೀಯ ಶಾಲೆ ಪ್ರಾರಂಭಿಸುವೆ. ರಾಜಕೀಯ ಪ್ರವೇಶಿಸುವವರಿಗೆ ಪೂರ್ಣ ತರಬೇತಿ ನೀಡುವ ಗುರಿ ಹೊಂದಿದ್ದೇನೆ~ ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT