ADVERTISEMENT

ರೈತರ ಆಕ್ರೋಶ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:20 IST
Last Updated 16 ಫೆಬ್ರುವರಿ 2011, 19:20 IST

ಯಲಹಂಕ:  ಕರ್ನಾಟಕ ಗೃಹಮಂಡಳಿ ವತಿಯಿಂದ ವಶಪಡಿಸಿಕೊಂಡಿರುವ ಜಮೀನುಗಳಿಗೆ ಪರಿಹಾರ ನೀಡುವ ಸಂಬಂಧ ಕರೆದಿದ್ದ ಸಭೆಯನ್ನು ರದ್ದುಪಡಿಸಿದ ಪರಿಣಾಮ ಆಕ್ರೋಶಗೊಂಡ ರೈತರು ಬೆಂಗಳೂರು ಉತ್ತರ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಗೃಹ ಮಂಡಳಿಯಿಂದ 2006ರಲ್ಲಿ ಅದ್ದೆ ವಿಶ್ವನಾಥಪುರ ಮತ್ತು ಶ್ರೀರಾಮನಹಳ್ಳಿ ಗ್ರಾಮಗಳಲ್ಲಿ 420 ಎಕರೆ ಕೃಷಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಲಾಗಿತ್ತು.ಆದರೆ ಇದುವರೆಗೂ ಪರಿಹಾರ ನೀಡದೆ ಅನವಶ್ಯಕವಾಗಿ ಕಾಲಹರಣ ಮಾಡುತ್ತಿದ್ದು, ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನೇಕ ಬಾರಿ ರೈತರ ಸಭೆ ಕರೆದು ಮುಂದೂಡಲಾಗುತ್ತಿದೆ ಎಂದು ರೈತರು ದೂರಿದರು.

ಗೃಹಮಂಡಳಿ, ಕಂದಾಯ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಗ್ರಾಮದಲ್ಲಿ ಸಭೆ ನಡೆಸಿ, ಸ್ಥಳ ಪರಿಶೀಲಿಸುವ ಕಾರ್ಯಕ್ರಮ ಮಂಗಳವಾರ ನಿಗದಿಪಡಿಸಲಾಗಿತ್ತು.ಈ ಬಗ್ಗೆ ರೈತರಿಗೆ ಮೊದಲೇ ಪತ್ರ ಬರೆದು ತಿಳಿಸಿದ್ದ ಹಿನ್ನೆಲೆಯಲ್ಲಿ ಸಭೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.ನಂತರ ಗೃಹಮಂಡಳಿಯ ಇಬ್ಬರು ಅಧಿಕಾರಿಗಳು ಗ್ರಾಮಕ್ಕೆ ಬಂದು ಇಂದು ಸಭೆ ರದ್ದಾಗಿರುವ ಬಗ್ಗೆ ತಿಳಿಸಿದರು.ಇದರಿಂದ ಕುಪಿತರಾದ ರೈತರು, ಅಧಿಕಾರಿಗಳಿಗೆ ಘೇರಾವ್ ಹಾಕಿ ಮಂಡಳಿಯ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರೈತ ಮುಖಂಡ ನಾರಾಯಣರೆಡ್ಡಿ ಮಾತನಾಡಿ, ಸಮಂಜಸ ಕಾರಣ ನೀಡದೆ ಅನವಶ್ಯಕವಾಗಿ ಯೋಜನೆಯ ಬೆಲೆ ನಿಗದಿ ಸಭೆಯನ್ನು ಮಂದೂಡುತ್ತಿರುವುದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಬಗ್ಗೆ ಕೂಡಲೆ ಕ್ರಮ ಕೈಗೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಬೆಲೆ ನಿಗದಿಪಡಿಸಲು ತುರ್ತಾಗಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದ ಅವರು, ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಗ್ರಾ.ಪಂ. ಸದಸ್ಯ ಕೆಂಚೆಲ್ಲಪ್ಪ, ರೈತ ಮುಖಂಡರಾದ ಸತೀಶ್, ದೊಡ್ಡಮುನಿಯಪ್ಪ, ಚನ್ನೇಗೌಡ ಸೇರಿದಂತೆ ಎರಡೂ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.