ಬೆಂಗಳೂರು: ಕಾಟನ್‌ಪೇಟೆ ಬಳಿ ಸಿದ್ದಾರ್ಥನಗರದಲ್ಲಿ ನಡೆದಿದ್ದ ರೌಡಿ ಗುಪೇಂದ್ರ (40) ಅಲಿಯಾಸ್ ಗುಪ್ಪ ಎಂಬಾತನ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಗುಪೇಂದ್ರನ ಅಕ್ಕನ ಮಗನಾದ ಬನಶಂಕರಿಯ ನವೀನ್‌ಕುಮಾರ್ ಅಲಿಯಾಸ್ ಅಪ್ಪು (27), ನಿರ್ಮಲ್ (29), ವಿಲ್ಸನ್‌ಗಾರ್ಡನ್ ಬಳಿಯ ವಿನಾಯಕನಗರದ ನಾಗರಾಜ ಉರುಫ್ ನಾಗ (27) ಮತ್ತು ಕೆಂಪಾಪುರ ಅಗ್ರಹಾರದ ಜೀವಾನಂದ (27) ಬಂಧಿತರು.
`ಜೈ ಭೀಮನಗರದಲ್ಲಿ ಗುಪೇಂದ್ರನಿಗೆ ಸೇರಿದ ನಾಲ್ಕು ಮನೆಗಳಿವೆ. ಆ ಮನೆಗಳ ಒಡೆತನದ ವಿಷಯವಾಗಿ ನವೀನ್‌ಕುಮಾರ್ ಮತ್ತು ಗುಪೇಂದ್ರನ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಕಾರಣಕ್ಕಾಗಿ ಆತ ಇತರೆ ಆರೋಪಿಗಳ ಜತೆ ಸೇರಿ ಗುಪೇಂದ್ರನ ಮೇಲೆ ಆ.7ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಪ್ರಕರಣದ ಇತರೆ ಆರೋಪಿಗಳಾದ ಅರ್ಜುನ್ ಮತ್ತು ಗಣೇಶ ತಲೆಮರೆಸಿಕೊಂಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಸೋಮವಾರ ತಿಳಿಸಿದರು.
ಮಹಿಳೆ ಆತ್ಮಹತ್ಯೆ
ನಾಗರಬಾವಿ 11ನೇ ಹಂತದ ಏಳನೇ ಅಡ್ಡರಸ್ತೆ ನಿವಾಸಿ ವಿಖ್ಯಾತ್ ಎಂಬುವರ ಪತ್ನಿ ಸರೋಜಾ (36) ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಮದುವೆಯಾಗಿ 17 ವರ್ಷವಾಗಿತ್ತು. ಅವರ ಇಬ್ಬರು ಮಕ್ಕಳು ಶೃಂಗೇರಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಖ್ಯಾತ್ ಎಲೆಕ್ಟ್ರಿಕಲ್ ಗುತ್ತಿಗೆದಾರರು ಎಂದು ಪೊಲೀಸರು ಹೇಳಿದ್ದಾರೆ.
`ಪತ್ನಿ ಭಾನುವಾರ ಮಧ್ಯಾಹ್ನ ಅಡುಗೆ ಮಾಡಿರಲಿಲ್ಲ. ಈ ವಿಷಯವಾಗಿ ಪತ್ನಿ ಮತ್ತು ನನ್ನ ನಡುವೆ ಜಗಳವಾಯಿತು. ನಂತರ ನಾನು ಸ್ನೇಹಿತನ ಮನೆಗೆ ಹೋದೆ. ರಾತ್ರಿ 12 ಗಂಟೆ ಸುಮಾರಿಗೆ ಬಂದು ಮನೆ ಬಾಗಿಲು ಬಡಿದೆ. ಪತ್ನಿ ಬಾಗಿಲು ತೆರೆಯದಿದ್ದರಿಂದ ಪುನಃ ಸ್ನೇಹಿತನ ಮನೆಗೆ ಹೋಗಿ ಮಲಗಿದೆ. ಸೋಮವಾರ ಬೆಳಿಗ್ಗೆ ಬಂದು ಬಾಗಿಲು ಬಡಿದಾಗಲೂ ಪ್ರತಿಕ್ರಿಯೆ ಬಾರಲಿಲ್ಲ. ಇದರಿಂದ ಅನುಮಾನಗೊಂಡು ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ಪತ್ನಿ ನೇಣು ಹಾಕಿಕೊಂಡಿರುವುದು ಗೊತ್ತಾಯಿತು ಎಂದು ವಿಖ್ಯಾತ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ~ ಎಂದು ಪೊಲೀಸರು ತಿಳಿಸಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಆರೋಪಿ ಬಂಧನ
ಕೆಂಗೇರಿ ಉಪನಗರದಲ್ಲಿ ನಡೆದಿದ್ದ ಶಿವಕುಮಾರ್ (35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಮುರುಡೇಗೌಡ (26) ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ್ ಮತ್ತು ಮುರುಡೇಗೌಡ, ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೊಳಾಯಿ ಜೋಡಣೆ ಕೆಲಸ ಮಾಡುತ್ತಿದ್ದರು. ಆ.9ರಂದು ರಾತ್ರಿ ಅವರಿಬ್ಬರೂ ಪಾನಮತ್ತರಾಗಿದ್ದ ಸಂದರ್ಭದಲ್ಲಿ ಕೂಲಿ ಹಣದ ವಿಷಯವಾಗಿ ಜಗಳವಾಗಿತ್ತು. ಈ ವೇಳೆ ಆರೋಪಿಯು ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿ ತುಮಕೂರು ಬಳಿ ಕ್ಯಾತಸಂದ್ರದಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.