ADVERTISEMENT

ರೌಡಿ ನಾಗರಾಜ್‌ ಹೆಸರಲ್ಲಿ ₹ 40 ಕೋಟಿ ಆಸ್ತಿ!

​ಪ್ರಜಾವಾಣಿ ವಾರ್ತೆ
Published 4 ಜೂನ್ 2017, 20:22 IST
Last Updated 4 ಜೂನ್ 2017, 20:22 IST
ರೌಡಿ ನಾಗರಾಜ್‌ ಹೆಸರಲ್ಲಿ ₹ 40 ಕೋಟಿ ಆಸ್ತಿ!
ರೌಡಿ ನಾಗರಾಜ್‌ ಹೆಸರಲ್ಲಿ ₹ 40 ಕೋಟಿ ಆಸ್ತಿ!   

ಬೆಂಗಳೂರು: ಉದ್ಯಮಿಗಳ ಅಪಹರಣ ಹಾಗೂ ಹಳೇ ನೋಟು ಬದಲಾವಣೆ ದಂಧೆ ಆರೋಪದಡಿ ಬಂಧಿಸಲಾಗಿರುವ ರೌಡಿ ನಾಗರಾಜ್‌ ಹೆಸರಿನಲ್ಲಿರುವ ಆಸ್ತಿ ಮೌಲ್ಯ ಸುಮಾರು ₹ 40 ಕೋಟಿ.

ಹೆಣ್ಣೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ನಾಗರಾಜ್‌ ಹಾಗೂ ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿಯನ್ನು ಕಸ್ಟಡಿಗೆ ಪಡೆದಿರುವ ಶ್ರೀರಾಮಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆಸ್ತಿ ಬಗ್ಗೆಯೂ ಮಾಹಿತಿ ಕಲೆಹಾಕಿದ್ದಾರೆ.

‘ಶ್ರೀರಾಮಪುರದಲ್ಲೇ ನಾಗರಾಜ್‌ ಹೆಸರಿನಲ್ಲಿ ಐದು ಮನೆಗಳಿವೆ. ಅದರಲ್ಲಿ ಮೂರು ಮನೆಗಳು ನಾಲ್ಕು ಅಂತಸ್ತಿನವು. ಉಳಿದ ಎರಡು ಐದು ಅಂತಸ್ತಿನವು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ADVERTISEMENT

‘ನೆಲಮಂಗಲ ಬಳಿ ಆರೋಪಿಯ ಹೆಸರಿನಲ್ಲಿ ಜಮೀನು ಇದ್ದು, ಅಲ್ಲಿ ಫಾರ್ಮ್‌ಹೌಸ್‌ ಇದೆ. ಆತನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿರುವ ಆಸ್ತಿ ಬಗ್ಗೆ ಸದ್ಯಕ್ಕೆ ನಿಖರ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದರು.

‘ಪ್ರಕರಣ ದಾಖಲಾಗುವ ಮುನ್ನವೇ ಆರೋಪಿಯು ಈ ಆಸ್ತಿ ಗಳಿಸಿದ್ದಾನೆ. ಹೀಗಾಗಿ ಆಸ್ತಿಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಸಲಹೆಯಂತೆ ಮುಂದುವರಿಯುತ್ತೇವೆ’ ಎಂದರು.

ಸಂಬಂಧವಿಲ್ಲದ ಉತ್ತರ: ‘ವಿಚಾರಣೆ ವೇಳೆ ಯಾವುದೇ ಪ್ರಶ್ನೆ ಕೇಳಿದರೂ ನಾಗರಾಜ್‌, ಏನೇನೋ ಉತ್ತರ ಹೇಳುತ್ತಿದ್ದಾನೆ. ಹೆಚ್ಚು ಪ್ರಶ್ನೆ ಕೇಳಿದರೆ, ಕಾಲು ಹಿಡಿದು ಗೋಗರೆಯುತ್ತಿದ್ದಾನೆ’ ಎಂದು ಅಧಿಕಾರಿ ಹೇಳಿದರು.

‘ತಮಿಳುನಾಡಿನಲ್ಲಿ ಹಳೇ ನೋಟು ಬದಲಾವಣೆ ಮಾಡಿದ್ದಾನೆ.  ಅಲ್ಲಿಂದ ತಂದಿದ್ದ ಹೊಸ ನೋಟುಗಳನ್ನು ಬೆಂಗಳೂರಿನಲ್ಲಿರುವ ಕೆಲ ಪರಿಚಯಸ್ಥರಿಗೆ ಕೊಟ್ಟಿರುವ ಮಾಹಿತಿ ಇದ್ದು, ಅದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.