ADVERTISEMENT

ಲಂಚ: ಲೋಕಾಯುಕ್ತ ಬಲೆಗೆ ಪಿಎಸ್‌ಐ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:07 IST
Last Updated 24 ಸೆಪ್ಟೆಂಬರ್ 2013, 20:07 IST

ಬೆಂಗಳೂರು: ಆಟೊ ರಿಕ್ಷಾ ಚಾಲಕರೊಬ್ಬರಿಂದ ₨ 2 ಸಾವಿರ ಲಂಚ ಕೇಳಿದ ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಸುಧೀಂದ್ರ ಅವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ಆಟೊ ಚಾಲಕ ಸುರೇಂದ್ರ ಅವರು ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇದೇ 8ರಂದು ಆಟೊ ನಿಲ್ಲಿಸಿಕೊಂಡಿದ್ದಾಗ ಆರೋಪಿ ಸುಧೀಂದ್ರ ಅವರು ಪ್ರಕರಣ ದಾಖಲಿಸಿದ್ದರು. ನಿಲುಗಡೆಗೆ ಅವಕಾಶ ಇಲ್ಲದ ಸ್ಥಳದಲ್ಲಿ ವಾಹನ ನಿಲ್ಲಿಸಿರುವುದು, ಮೀಟರ್‌ ತೋರಿ ಸುತ್ತಿರುವುದಕ್ಕಿಂತ ಹೆಚ್ಚು ಬಾಡಿಗೆ ಪಡೆಯುತ್ತಿರುವುದು ಮತ್ತು ಪರವಾನಗಿ ಇಲ್ಲ ಎಂಬ ಕಾರಣ ನೀಡಿ ಸುರೇಂದ್ರ ವಿರುದ್ಧ ಪ್ರಕರಣ ದಾಖಲಿಸಿ ಆಟೊವನ್ನು ವಶಪಡಿಸಿಕೊಳ್ಳಲಾಯಿತು.

ಅದೇ ದಿನ ಸುಧೀಂದ್ರ ಅವರನ್ನು ಪುನಃ ಭೇಟಿ ಮಾಡಿದ ಸುರೇಂದ್ರ, ಆಟೋ ಬಿಟ್ಟುಕೊಡುವಂತೆ ಕೋರಿದರು. ಇದಕ್ಕೆ ಸುಧೀಂದ್ರ ಅವರು ₨ 4,600 ಲಂಚ ಮತ್ತು ಪರ ವಾನಗಿಯ ಮೂಲ ದಾಖಲೆ ನೀಡುವಂತೆ ಸೂಚಿಸಿದರು. ಅಷ್ಟು ದುಡ್ಡು ಕೊಟ್ಟ ಸುರೇಂದ್ರ ಅವರಿಗೆ ಆಟೊ ಮರಳಿ ನೀಡಲಾಯಿತು. ಆದರೆ ಪರವಾನಗಿ ದಾಖಲೆ ಪೊಲೀಸರ ಬಳಿಯೇ ಇತ್ತು.

ಮಾರನೆಯ ದಿನ ಸುರೇಂದ್ರ ಅವರು ಪುನಃ ಪೊಲೀಸರನ್ನು ಭೇಟಿಯಾದರು. ಪರವಾನಗಿಯ ಮೂಲ ದಾಖಲೆಗಳನ್ನು ಮರಳಿಸಲು, ₨ 2,000 ಲಂಚ ನೀಡಬೇಕು ಎಂದು ಸುಧೀಂದ್ರ ಹೇಳಿದರು. ಲಂಚ ಕೊಡಲು ಮನಸ್ಸು ಮಾಡದ ಸುರೇಂದ್ರ, ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.

ದೂರಿನ ಆಧಾರಲ್ಲಿ ಸುಧೀಂದ್ರ ಬಂಧನಕ್ಕೆ ಬಲೆ ಬೀಸಿದ ಲೋಕಾಯುಕ್ತ ಪೊಲೀಸರು, ಲಂಚ ಪಡೆಯುತ್ತಿದ್ದ ಸಂದರ್ಭದಲ್ಲೇ ಅವರನ್ನು ಬಂಧಿಸಿದ್ದಾರೆ. ವಿಚಾರಣೆ ಮುಂದುವರಿದಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.