ADVERTISEMENT

ಲಂಡನ್‌ಗಿಂತ ಬೆಂಗಳೂರೇ ನನಗಿಷ್ಟ

‘ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ’ ಪ್ರೊ.ಸಿ.ಎನ್‌.ಆರ್‌.ರಾವ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2013, 20:18 IST
Last Updated 31 ಡಿಸೆಂಬರ್ 2013, 20:18 IST
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ‘ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಚಿತ್ರದಲ್ಲಿದ್ದಾರೆ
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ‘ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಚಿತ್ರದಲ್ಲಿದ್ದಾರೆ   

ಬೆಂಗಳೂರು:  ‘ರಾಷ್ಟ್ರೀಯ ಹಾಗೂ ಅಂತರ­ರಾಷ್ಟ್ರೀಯ ಮಟ್ಟದ ಗೌರವ­ಕ್ಕಿಂತ ನಮ್ಮವರು ಮಾಡುವ ಸನ್ಮಾನ ಹೆಚ್ಚು ಸಂತೋಷ ಕೊಡುತ್ತದೆ. ಲಂಡನ್‌­ಗಿಂತ ನನಗೆ ಬೆಂಗಳೂರೇ ಇಷ್ಟ­ವಾಗುತ್ತದೆ’ ಎಂದು ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ‘ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನನಗೆ ‘ಭಾರತ ರತ್ನ’ ಗೌರವಕ್ಕಿಂತ ಮೊದಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ. ನಾನೆಲ್ಲೇ ಇದ್ದರೂ ರಾಜ್ಯ, ಅದರಲ್ಲೂ ಬೆಂಗಳೂರನ್ನು ಮರೆ­ಯಲು ಸಾಧ್ಯವಿಲ್ಲ. ನಾಡಿನ ಜನತೆ ನೀಡುವ ಗೌರವ ನನಗೆ ಹೆಚ್ಚು ಸಂತೋಷ ಕೊಡುತ್ತದೆ’ ಎಂದರು.
‘ಕರ್ನಾಟಕ ವಿಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದೆ. ಬೆಂಗಳೂರು ವಿಜ್ಞಾನದ ರಾಜಧಾನಿ­ಯಾಗಿದೆ. ವಿಶ್ವದಲ್ಲಿ ಬೆಂಗಳೂರಿಗೆ ವಿಶಿಷ್ಟವಾದ ಸ್ಥಾನವಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಸಿ.ಎನ್‌.ಆರ್‌.ರಾವ್‌ ಅವರ ಸಾಧನೆ ಮಹತ್ವ­ವಾದುದು. ಅವರ ಸಾಧನೆಗೆ ನೊಬೆಲ್‌ ಪ್ರಶಸ್ತಿ ಬರಬೇಕಿತ್ತು. ಅವರಿಗೆ ಮುಂದಿನ ದಿನಗಳಲ್ಲಿ ನೊಬೆಲ್‌ ಪ್ರಶಸ್ತಿ ಲಭಿಸಲಿ ಎಂಬ ಹಾರೈಕೆ ನನ್ನದು. ಸಿ.ವಿ.ರಾಮನ್‌ ಅವರ ನಂತರ ವಿಜ್ಞಾನ ಕ್ಷೇತ್ರದ ದೊಡ್ಡ ಹೆಸರು ಸಿ.ಎನ್‌.ಆರ್‌.ರಾವ್‌’ ಎಂದರು.

ಹಿರಿಯ ಪತ್ರಕರ್ತರಾದ ಎಸ್‌.ವಿ.­ಜಯ­ಶೀಲ­ರಾವ್‌, ಡಾ.ಆರ್‌.­ಪೂರ್ಣಿಮಾ, ಎಂ.ಎ.­ಪೊನ್ನಪ್ಪ, ಸೋಮ­ಸುಂದರ ರೆಡ್ಡಿ ಮತ್ತು ವ್ಯಂಗ್ಯಚಿತ್ರ ಕಲಾವಿದ ಬಿ.ಜಿ.ಗುಜ್ಜಾರಪ್ಪ ಅವರಿಗೆ ‘ಪ್ರೆಸ್‌ಕ್ಲಬ್‌ ವಾರ್ಷಿಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕ್ರೀಡಾಪಟು ಎಚ್‌.ಎನ್‌.­ಗಿರೀಶ್‌, ಚಲನಚಿತ್ರ ನಟ ಸುದೀಪ್‌ ಹಾಗೂ ಕರ್ನಾಟಕ ಬುಲ್ಡೋಜರ್ಸ್‌ ಕ್ರಿಕೆಟ್‌ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.

ಗೃಹ ಸಚಿವ ಕೆ.ಜೆ.ಜಾರ್ಜ್‌, ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ, ಸಾರಿಗೆ ಸಚಿವ ರಾಮ­ಲಿಂಗಾ­ರೆಡ್ಡಿ, ಶಾಸಕ ಅಶೋಕ್‌ ಖೇಣಿ, ಪ್ರೆಸ್‌ಕ್ಲಬ್‌ ಅಧ್ಯಕ್ಷ ಪಿ.ರಾಮಕೃಷ್ಣ ಉಪಾಧ್ಯ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.