ಬೆಂಗಳೂರು: `ಲಂಬಾಣಿ ಸಾಹಿತ್ಯವನ್ನು ದಲಿತ ಸಾಹಿತ್ಯದ ಪರಿಭಾಷೆಯಲ್ಲಿ ಪರಿಗಣಿಸಿದಾಗ ಮಾತ್ರ ಅದಕ್ಕೊಂದು ವಿಶಾಲ ಅರ್ಥ ದೊರಕುತ್ತದೆ. ಭಾರತದ 17 ಭಾಷೆಗಳಲ್ಲಿಯೂ ಪ್ರಸ್ತುತ ದಲಿತ ಸಾಹಿತ್ಯ ಶ್ರಿಮಂತವಾಗಿ ಬೆಳೆದಿದೆ~ ಎಂದು ಚಿಂತಕಿ ವಿಮಲಾ ಥೋರಟ್ ಅಭಿಪ್ರಾಯಪಟ್ಟರು.
ನಗರದ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ `ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ~ ಮತ್ತು ಸಾಹಿತ್ಯ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಬಂಜಾರ ಭಾಷಾ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
`ಲಂಬಾಣಿ ಸಮುದಾಯವನ್ನು ಕೇವಲ ಪ್ರದರ್ಶನದ ವಸ್ತುಗಳಂತೆ ಕಾಣುತ್ತಿರುವುದು ದುಃಖಕರ ಸಂಗತಿ. ಲಂಬಾಣಿಗಳ ಗೋರ್ಬೋಲಿ ಭಾಷೆಯ ಬೆಳವಣಿಗೆಗಾಗಿ ಸಾಹಿತ್ಯ ಅಕಾಡೆಮಿಯ ಜತೆಗೆ ಎಲ್ಲ ಭಾಷಾ ಅಕಾಡೆಮಿಗಳು ಶ್ರಮಿಸಬೇಕಿದೆ~ ಎಂದು ಹೇಳಿದರು.
`ದಲಿತ ಸಾಹಿತ್ಯದಲ್ಲಿರುವ ಆದಿವಾಸಿ, ಅಲೆಮಾರಿ, ಅರೆ ಅಲೆಮಾರಿ, ಸ್ತ್ರೀ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲಿ ರಚನೆಯಾಗುತ್ತಿರುವ ಸಾಹಿತ್ಯಗಳು ಮುಖ್ಯವಾಹಿನಿಗೆ ಬರಬೇಕಿವೆ. ಭಾಷೆ ಬೆಳವಣಿಗೆ ಕಂಡರೆ ಮಾತ್ರ ಉತ್ತಮ ಸಾಹಿತ್ಯ ನಿರ್ಮಾಣಗೊಳ್ಳಲು ಸಾಧ್ಯವಿದೆ~ ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, `ಭಾರತದ ಸಂಸ್ಕೃತಿಯನ್ನು ಸೂಚಿಸುವಾಗ ಲಂಬಾಣಿ ಮಹಿಳೆ ತೊಟ್ಟಿರುವ ಸಾಂಪ್ರದಾಯಿಕ ಉಡುಪನ್ನು ತಾಜ್‌ಮಹಲ್‌ನಂತೆ ತೋರಿಸಲಾಗುತ್ತಿದೆ, ಆದರೆ ಅವರ ಅಭಿವೃದ್ದಿ ಮತ್ತು ಭಾಷೆಯ ಬೆಳವಣಿಗೆ ಶೂನ್ಯವಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದ ಅವರು, `ಕೊಡವ ಭಾಷಾ ಸಮ್ಮೇಳನ ನಡೆಸಿದ ನಂತರ ಅಕಾಡೆಮಿ ಬಂಜಾರ ಭಾಷಾ ಸಮ್ಮೇಳನ ನಡೆಸುತ್ತಿರುವುದು ಉತ್ತಮ ಸಂಗತಿಯಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್.ಜಾಫೆಟ್, ಮರಾಠಿ ಸಾಹಿತಿ ಲಕ್ಷ್ಮಣ್ ಗಾಯಕ್‌ವಾಡ್, ಸಾಹಿತಿಗಳಾದ ಬಿ.ಟಿ.ಲಲಿತಾನಾಯಕ್, ಡಾ.ಎ.ಆರ್.ಗೋವಿಂದಸ್ವಾಮಿ, ಕೆ.ಶಿವಮೂರ್ತಿ, ಪಿ.ಕೆ.ಖಂಡೋಬಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.