ADVERTISEMENT

ಲಾರಿ ಹರಿಸಿ ಅತ್ತೆಯನ್ನೇ ಕೊಂದ ಅಳಿಮಯ್ಯ

ನೈಸ್ ರಸ್ತೆ ಜಂಕ್ಷನ್‌ನಲ್ಲಿ ನಡೆದ ಘಟನೆ: ಹೆಂಡತಿ, ಮಾವನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹೋಗುತ್ತಿದ್ದ ಪತ್ನಿ ಮತ್ತು ಅತ್ತೆ- ಮಾವನ ಮೇಲೆಯೇ ಲಾರಿ ಹರಿಸಿದ ಆಘಾತಕಾರಿ ಘಟನೆ ನೈಸ್ ರಸ್ತೆ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿಯ ಅತ್ತೆ ಆದಿಲಕ್ಷ್ಮಿ (50) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಾವ ಕಾಂತರಾಜು (55) ಹಾಗೂ ಪತ್ನಿ ಮಂಜುಳಾ (19) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಈ ಸಂಬಂಧ ಕೆಂಗೇರಿ ಪೊಲೀಸರು ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಂದ್ರಶೇಖರ್‌ನನ್ನು (23) ಬಂಧಿಸಿದ್ದಾರೆ. ತಲಘಟ್ಟಪುರ ನಿವಾಸಿಯಾದ ಚಂದ್ರಶೇಖರ್, 2011ರ ಮೇ 29ರಂದು ಮಂಜುಳಾ ಅವರನ್ನು ವಿವಾಹವಾಗಿದ್ದ. ಆರು ತಿಂಗಳುಗಳ ಕಾಲ ಅನ್ಯೋನ್ಯವಾಗಿದ್ದ ದಂಪತಿ, ವರದಕ್ಷಿಣೆ ಸಂಬಂಧ ಜಗಳವಾಡಿ ಪರಸ್ಪರ ದೂರಾಗಿದ್ದರು. ಹೀಗಾಗಿ ಮಂಜುಳಾ ಕೆಂಗೇರಿ ಬಳಿಯ ಹೆಮ್ಮಿಗೆಪುರದಲ್ಲಿರುವ ತವರುಮನೆಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾಂತರಾಜು ನೈಸ್ ರಸ್ತೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದಾರೆ. ಆದಿಲಕ್ಷ್ಮಿ ಕುಂಬಳಗೋಡಿನಲ್ಲಿ ವೈರ್ ತಯಾರಿಕಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮಂಜುಳಾ, ನೈಸ್ ರಸ್ತೆಯಲ್ಲಿರುವ ಪೇಪರ್ ಕಾರ್ಖಾನೆಯಲ್ಲಿ ಮೂರು ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು.

ಸಂಜೆ ಆರು ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡ ಕಾಂತರಾಜು, ಪತ್ನಿ-ಮಗಳನ್ನು ಕರೆದುಕೊಂಡು ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಹಾಗೂ ಅತ್ತೆ-ಮಾವ ನೈಸ್ ರಸ್ತೆ ಮಾರ್ಗವಾಗಿ ಮನೆಗೆ ಹೋಗುವ ಬಗ್ಗೆ ಮೊದಲೇ ಅರಿತಿದ್ದ ಚಂದ್ರಶೇಖರ್, ಅವರನ್ನು ಕೊಲೆ ಮಾಡಲು ಸಂಚು ರೂಪಿಸಿಕೊಂಡಿದ್ದ. ಹೀಗಾಗಿ ರಸ್ತೆ ಬದಿ ಲಾರಿ ನಿಲ್ಲಿಸಿಕೊಂಡು ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಕಾದಿದ್ದಾನೆ. ಕಾಂತರಾಜು, ಪತ್ನಿ-ಮಗಳ ಜತೆ ಬೈಕ್‌ನಲ್ಲಿ ಹೋಗುತ್ತಿದ್ದಂತೆಯೇ ಲಾರಿಯಲ್ಲಿ ಅವರನ್ನು ಹಿಂಬಾಲಿಸಿದ ಆರೋಪಿ, ನೈಸ್ ರಸ್ತೆಯ ಜಂಕ್ಷನ್‌ನಲ್ಲಿ ಬೈಕ್‌ಗೆ ವಾಹನ ಗುದ್ದಿಸಿದ್ದಾನೆ.

ಘಟನೆಯಲ್ಲಿ ಕಾಂತರಾಜು ಮತ್ತು ಮಂಜುಳಾ ರಸ್ತೆ ಎಡಭಾಗಕ್ಕೆ ಉರುಳಿಕೊಂಡಿದ್ದು, ಆದಿಲಕ್ಷ್ಮಿ ಬಲಕ್ಕೆ ಬಿದ್ದಿದ್ದಾರೆ. ಈ ವೇಳೆ ಪುನಃ ಲಾರಿಯನ್ನು ಹಿಮ್ಮುಖವಾಗಿ ಚಾಲನೆ ಮಾಡಿದ ಆರೋಪಿ, ಆದಿಲಕ್ಷ್ಮಿ ಅವರ ತಲೆ ಮೇಲೆಯೇ ಚಕ್ರ ಹತ್ತಿಸಿ ವಾಹನದೊಂದಿಗೆ ಪರಾರಿಯಾಗಿದ್ದ.

ಈ ವೇಳೆ ಘಟನಾ ಸ್ಥಳದಲ್ಲಿದ್ದ ಕಾರು ಚಾಲಕರೊಬ್ಬರು ಆತನ ಲಾರಿಯನ್ನು ಹಿಂಬಾಲಿಸಿದ್ದಾರೆ. ಅದನ್ನು ಮನಗಂಡ ಆರೋಪಿ, ಸುಮಾರು ಒಂದೂವರೆ ಕಿ.ಮೀನಷ್ಟು ಮುಂದೆ ಹೋಗಿ ಲಾರಿ ಬಿಟ್ಟು ಪರಾರಿಯಾಗಿದ್ದ. ಗಾಯಗೊಂಡಿರುವ ಮಂಜುಳಾ ಮತ್ತು ಕಾಂತರಾಜು ಅವರನ್ನು ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಯ ಮೊಬೈಲ್ ತ್ಯಾಗರಾಜನಗರದಲ್ಲಿರುವ ಮೊಬೈಲ್ ಗೋಪುರದ (ಟವರ್) ಮೂಲಕ ಸಂಪರ್ಕ ಪಡೆಯುತ್ತಿತ್ತು. ತ್ಯಾಗರಾಜನಗರದಲ್ಲಿ ಪತಿಗೆ ಸಂಬಂಧಿಕರಿರುವ ಬಗ್ಗೆ ಮಂಜುಳಾ ನೀಡಿದ ಮಾಹಿತಿ ಆಧರಿಸಿ ರಾತ್ರಿ ಎರಡು ಗಂಟೆ ಸುಮಾರಿಗೆ ಚಂದ್ರಶೇಖರ್‌ನನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು'
`ಪತಿ ಹಾಗೂ ಅವರ ಪೋಷಕರು ವರದಕ್ಷಿಣೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರಿಂದ ತವರು ಮನೆಗೆ ಬಂದು ನೆಲೆಸಿದ್ದೇನೆ. ಆದರೆ ಪತಿ ಪ್ರತಿನಿತ್ಯ ಇಲ್ಲಿಗೂ ಬಂದು ಜಗಳವಾಡುತ್ತಿದ್ದರು.

ಹೀಗಾಗಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೆ. ಇತ್ತೀಚೆಗೆ ಪತಿಯೊಂದಿಗೆ ಬಂದಿದ್ದ ಅವರ ಭಾವ ಆನಂದ್, `ನಿಮ್ಮ ಕುಟುಂಬವನ್ನು ಜೀವಂತವಾಗಿ ಬಿಡುವುದಿಲ್ಲ' ಎಂದು ಬೆದರಿಕೆ ಹಾಕಿ ಹೋಗಿದ್ದರು' ಎಂದು ಮಂಜುಳಾ ಆರೋಪಿಸಿದರು.

`ಪತಿಯ ಮೇಲೆಯೇ ಹಲ್ಲೆ ಮಾಡಿಸಿದ್ದಳು'
`ಎರಡು ಸ್ವಂತ ಲಾರಿಗಳನ್ನು ಹೊಂದಿರುವ ಮಗ, ಚಾಲಕನೂ ಆಗಿದ್ದಾನೆ. ಈ ಹಿಂದೆ ಕೆಲಸದ ನಿಮಿತ್ತ ನಾಯಂಡಹಳ್ಳಿಗೆ ಹೋಗಿದ್ದ ಮಗನ ಮೇಲೆ ಸೊಸೆ ಮಂಜುಳಾ, ದುಷ್ಕರ್ಮಿಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಳು.

ಈ ಸಂಬಂಧ ಬ್ಯಾಟರಾಯನಪುರ ಠಾಣೆಗೆ ದೂರು ಕೊಟ್ಟಿದ್ದೆ. ಇದಕ್ಕೆ ಪ್ರತಿಯಾಗಿ ಅವರ ಕುಟುಂಬ ಸದಸ್ಯರು ನಮ್ಮ ವಿರುದ್ಧ ವರದಕ್ಷಿಣಿ ಕಿರುಕುಳ ಆರೋಪದಡಿ ಹೆಬ್ಬುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ನಂತರ ದಂಪತಿ ಪರಸ್ಪರ ದೂರವಾಗಿದ್ದರು' ಎಂದು ಚಂದ್ರಶೇಖರ್‌ನ ತಂದೆ ವೆಂಕಟಾಚಲಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT