ADVERTISEMENT

ಲಾಲ್‌ಬಾಗ್‌ನಲ್ಲಿ ಬಗೆ ಬಗೆಯ ಸೇಬು...

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಬೆಂಗಳೂರು: ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಮತ್ತು ರಾಜ್ಯ ತೋಟಗಾರಿಕಾ ಇಲಾಖೆ ವತಿಯಿಂದ ಲಾಲ್‌ಬಾಗ್‌ನಲ್ಲಿ ಶುಕ್ರವಾರ ಆರಂಭವಾದ ನಾಲ್ಕು ದಿನಗಳ ಸೇಬು ಪ್ರದರ್ಶನ ಮತ್ತು ಮಾರಾಟ ಮೇಳ `ಅಂತರರಾಜ್ಯ ತೋಟಗಾರಿಕೆ ಸಂಗಮ~ಕ್ಕೆ ತೋಟಗಾರಿಕೆ ಇಲಾಖೆ ನಿರ್ದೇಶಕಿ ಪಿ. ಹೇಮಲತಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸೇಬು ಮೇಳ ಹಮ್ಮಿಕೊಳ್ಳಲಾಗಿದೆ. ಸುಮಾರು 3000 ಕಿ.ಮೀ ದೂರದ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಿಮಾಚಲ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಕೇರಳ ತಮಿಳುನಾಡಿನಲ್ಲಿ ಬೆಳೆದ ವಿವಿಧ ತಳಿಯ ಸೇಬುಗಳನ್ನು ಪ್ರದರ್ಶನಕ್ಕಿಡಲಾಗಿದೆ~ ಎಂದರು.

`ತೋಟಗಾರಿಕೆ ಇಲಾಖೆ ವರ್ಷದುದ್ದಕ್ಕೂ ವಿವಿಧ ಹಣ್ಣುಗಳ ಪ್ರದರ್ಶನವನ್ನು ಏರ್ಪಡಿಸುತ್ತಿದೆ. ಲಾಲ್‌ಬಾಗ್‌ನಲ್ಲಿ ನಾಲ್ಕನೇ ಬಾರಿ ಸೇಬಿನ ಹಮ್ಮಿಕೊಳ್ಳಲಾಗಿದೆ. ಕೊಚ್ಚಿ, ದೆಹಲಿ, ಪಾಟಲಿಪುತ್ರ, ಪುಣೆ ಸೇರಿದಂತೆ ಮಂಡಳಿ ಇದೇ ಮಾದರಿಯ ಪ್ರದರ್ಶನಗಳನ್ನು ಏರ್ಪಡಿಸಿರುವುದು ಸಂತಸದ ಸಂಗತಿ~ ಎಂದು ಹೇಳಿದರು.

`ಮೇಳದಲ್ಲಿ ಕೋಯ್ಲಿನ ನಂತರದ ತಂತ್ರಜ್ಞಾನ, ಉತ್ಪನ್ನಗಳ ಸಾಗಾಟದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಹಕರಿಗೆ ತಾಜಾ ಹಣ್ಣು ಒದಗಿಸುವ ಉದ್ದೇಶದಿಂದ ಕಾರ್ಟೂನ್ ಪೆಟ್ಟಿಗೆಗಳನ್ನು ಸಹ ಮಂಡಲಿ ವತಿಯಿಂದ ಬೆಳೆಗಾರರಿಗೆ ಒದಗಿಸಲಾಗುತ್ತಿದೆ.
 
ಒಟ್ಟು 40 ಮಳಿಗೆಗಳು ಮೇಳದಲ್ಲಿದ್ದು ಸೇಬಿನ ಜತೆಗೆ ಇತರೆ ತೋಟಗಾರಿಕೆ ಬೆಳೆಗಳನ್ನು ಖರೀದಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ~ ಎಂದು ತಿಳಿಸಿದರು. ಪರಿಸರ ತಜ್ಞ ಡಾ. ಅ.ನಾ.ಯಲ್ಲಪ್ಪರೆಡ್ಡಿ, ಮಂಡಳಿಯ ವಿಜಯ್ ಕುಮಾರ್ ಹಾಜರಿದ್ದರು.

ಬಗೆ ಬಗೆಯ ತಳಿಗಳು: ಕಾಶ್ಮೀರಿ ಡಿಲೀಷಿಯಸ್, ರಾಯಲ್ ಡಿಲೀಷಿಯಸ್, ರೆಡ್ ಡಿಲೀಷಿಯಸ್, ಗೋಲ್ಡನ್ ಡಿಲೀಷಿಯಸ್ ಮೇಳದಲ್ಲಿರುವ ಪ್ರಮುಖ ಸೇಬಿನ ತಳಿಗಳು. ಬೆಲೆ ಪ್ರತಿ ಕೆ.ಜಿಗೆ 60- 100 ರೂಪಾಯಿಗಳು.

ಮಂಡಲಿಯ ಕರ್ನಾಟಕ ವಿಭಾಗದ ಸಹಾಯಕ ನಿರ್ದೇಶಕ ಧರಮ್ ಸಿಂಗ್, `ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಮೇಳದಲ್ಲಿ ಸೇಬು ಅಗ್ಗವಾಗಿ ದೊರೆಯುತ್ತಿದೆ. ಗ್ರಾಹಕರಿಗೆ ಸೇಬಿನ ವೈವಿಧ್ಯಮಯ ತಳಿಗಳನ್ನು ಪರಿಚಯಿಸಲಾಗುತ್ತಿದೆ. ಸಬ್ಸಿಡಿ ಮತ್ತಿತರ ಸೌಲಭ್ಯಗಳನ್ನು ಮಂಡಲಿ ಒದಗಿಸುತ್ತಿದ್ದು ಬೆಳೆಗಾರರಿಗೆ ಅಗತ್ಯ ಬೆಂಬಲ ನೀಡಲಾಗುತ್ತಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.