ADVERTISEMENT

ಲೈಂಗಿಕ ಕಾರ್ಯಕರ್ತೆಯರ ಪ್ರತಿಭಟನೆ

ಪೊಲೀಸರಿಂದಲೇ ಅತ್ಯಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST

ಬೆಂಗಳೂರು: ಲೈಂಗಿಕ ಕಾರ್ಯಕರ್ತೆ­ಯರ ಮೇಲೆ ದೌರ್ಜನ್ಯ ನಡೆಸುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರದ ಪುರಭವನದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಲೈಂಗಿಕ ಕಾರ್ಯಕರ್ತೆಯರನ್ನು ಕೀಳಾಗಿ ಕಾಣುತ್ತಿರುವ ಪೊಲೀಸರು, ಅವರಿಂದ ಹಣ ವಸೂಲಿ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಥಳಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಅವಮಾನಿಸುತ್ತಿದ್ದಾರೆ. ಅಲ್ಲದೇ, ಠಾಣೆಗಳಿಗೆ ಎಳೆದೊಯ್ದು ಅತ್ಯಾಚಾರ ಎಸಗಿ ವಿಷಯ ಬಹಿರಂಗಪಡಿಸದಂತೆ ಬೆದರಿಕೆ ಹಾಕಿರುವ ಪ್ರಕರಣಗಳು ಸಾಕಷ್ಟಿವೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಾಧನ ಮಹಿಳಾ ಸಂಘದ ಸದಸ್ಯೆ ಎಂ.ಗೀತಾ ಮಾತನಾಡಿ, ‘ಲೈಂಗಿಕ ಕಾರ್ಯಕರ್ತೆಯರು ಅಪರಾಧಿಗಳಲ್ಲ. ಬದಲಾಗಿ ಆರ್ಥಿಕ ಅವಶ್ಯಕತೆ ಹಾಗೂ ಪರಿಸ್ಥಿತಿಗಳ ಬಲಿಪಶು ಎಂದು ಸುಪ್ರೀಂ ಕೋರ್ಟ್‌ ಪರಿಗಣಿಸಿದೆ. ಲೈಂಗಿಕ ಕಾರ್ಯಕರ್ತೆಯರು ಅಪರಾಧಿಗಳಲ್ಲ ಎಂಬುದನ್ನು ಪೊಲೀಸರು ಮನವರಿಕೆ ಮಾಡಿಕೊಡಬೇಕಿದೆ. ಕಿರುಕುಳ ನೀಡುವ ಪೊಲೀಸರ ವಿರುದ್ಧ ನೀಡುವ ದೂರನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ನ.29ರಂದು ರಾತ್ರಿ 9ಗಂಟೆಗೆ ಮೆಜೆಸ್ಟಿಕ್‌ನಲ್ಲಿ ಇಬ್ಬರು ಪೊಲೀಸರು ಹೊಯ್ಸಳ ವಾಹನದಲ್ಲೇ ಲೈಂಗಿಕ ಕಾರ್ಯಕರ್ತೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ, ಈ ವಿಷಯವನ್ನು ಬಹಿರಂಗಪಡಿಸಿದರೆ ದೂರು ದಾಖಲಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ’ ಎಂದು ಆರೋಪಿಸಿದರು.

ಸರ್ಕಾರ ವಿವಿಧ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು ಲೈಂಗಿಕ ಕಾರ್ಯಕರ್ತೆಯರ ಮೂಲಭೂತ ಹಕ್ಕುಗಳ ರಕ್ಷಣೆ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.