ADVERTISEMENT

ಲೋಕಾಯುಕ್ತಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಬೆಂಗಳೂರು:  ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಹಾಗೂ ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಸಹಕರಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ವರದಿಯ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ಕೋರಿ ಜಿಂದಾಲ್ ವಿಜಯನಗರ ಸ್ಟೀಲ್ಸ್ (ಈಗಿನ ಹೆಸರು ಜೆಡಬ್ಲ್ಯುಎಸ್ ಸ್ಟೀಲ್ಸ್) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಕಳೆದ ಜು. 27ರಂದು ಲೋಕಾಯುಕ್ತರು ನೀಡಿರುವ ವರದಿಯಲ್ಲಿ ತಮ್ಮ ವಿರುದ್ಧ ವಿನಾಕಾರಣ ಆರೋಪ ಹೊರಿಸಲಾಗಿದ್ದು ವರದಿ ರದ್ದು ಮಾಡುವಂತೆ ಅದು ಕೋರಿದೆ. ಈ ಹಂತದಲ್ಲಿ ಎಫ್‌ಐಆರ್‌ಗೆ ತಡೆ ನೀಡಲಾಗದು ಎಂದು ಮೌಖಿಕವಾಗಿ ತಿಳಿಸಿದ ನ್ಯಾಯಮೂರ್ತಿ ಡಾ.ಕೆ. ಭಕ್ತವತ್ಸಲ ನೇತೃತ್ವದ ವಿಭಾಗೀಯ ಪೀಠ, ಲೋಕಾಯುಕ್ತ , ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ.

ಪಟ್ಟಾ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು, ಅಕ್ರಮವಾಗಿ ಜಮೀನು ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವುದು, ಅರಣ್ಯ ಅಭಿವೃದ್ಧಿ ತೆರಿಗೆ ನೀಡದೆ ವಂಚಿಸಿರುವುದು, ಅಂದಿನ ಮುಖ್ಯಮಂತ್ರಿಗಳಿಗೆ ಅಕ್ರಮ ಗಣಿಗಾರಿಕೆಗೆ ಅನುಕೂಲ ಮಾಡಿಕೊಟ್ಟಿರುವುದು ಇತ್ಯಾದಿ ಆರೋಪಗಳು ಕಂಪೆನಿ ಮೇಲಿದೆ.
 
ವರದಿಯಲ್ಲಿ ತಮ್ಮ ಹೆಸರು ಉಲ್ಲೇಖಿಸುವ ಮೊದಲು ತಮಗೆ ನೋಟಿಸ್ ಜಾರಿಗೊಳಿಸಿಲ್ಲ. ಏಕಪಕ್ಷೀಯವಾಗಿ ಹೆಸರು ಉಲ್ಲೇಖಿಸಲಾಗಿದೆ. ಈ ರೀತಿ ವರದಿ ನೀಡುವ ಅಧಿಕಾರ ಲೋಕಾಯುಕ್ತರಿಗೆ ಇಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರ ವಿರುದ್ಧ ತನಿಖೆ ಕೈಗೊಳ್ಳಬೇಕೆ ವಿನಾ ತಮ್ಮ ವಿರುದ್ಧ ಈ ರೀತಿ ಕ್ರಮ ತೆಗೆದುಕೊಂಡಿರುವುದು ಸರಿಯಲ್ಲ ಎನ್ನುವುದು ಕಂಪೆನಿ ಅಧಿಕಾರಿಗಳ ವಾದ.

ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಹೊರಿಸಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಹಾಜರುಪಡಿಸಲು ಲೋಕಾಯುಕ್ತರಿಗೆ ಆದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆ ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.