ADVERTISEMENT

ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಬೆಂಗಳೂರು:  ತಮ್ಮ ವ್ಯವಹಾರದಲ್ಲಿ ಬಂಡವಾಳ ಹೂಡಿದರೆ ಅಧಿಕ ಲಾಭ ನೀಡುವುದಾಗಿ ಹೇಳಿ ವಂಚಿಸಿರುವ ಇಬ್ಬರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಟಿ.ಜಿ ರಾಮರೆಡ್ಡಿ(50) ಹಾಗೂ ಅವರ ಮಗ ದಿನೇಶ್ ರೆಡ್ಡಿ(31) ಬಂಧಿತ ಆರೋಪಿಗಳು. ಶಿವಾಜಿನಗರ ರಸಲ್ ಮಾರುಕಟ್ಟೆ ಬಳಿ ಆರ್.ಡಿ.ಜೆ ಸೀ ಫುಡ್ಸ್ ಹೆಸರಿನಲ್ಲಿ ಕಚೇರಿ ತೆರೆದು ಹೊರರಾಜ್ಯಗಳಿಂದ ಮೀನುಗಳನ್ನು ತರಿಸಿ ಹೊಟೇಲ್‌ಗಳಿಗೆ ಸರಬರಾಜು ಮಾಡುತ್ತಿದ್ದರು.

ರಾಮರೆಡ್ಡಿ ಹಾಗೂ ಅವರ ಎರಡನೇ ಹೆಂಡತಿ ಶ್ರೀದೇವಿ ಅವರು ತನ್ನ ಮತ್ತೊಬ್ಬ ಮಗ ಬಾಲಾಜಿರೆಡ್ಡಿಯನ್ನು ನಾಯಕ ನಟನನ್ನಾಗಿ ಮಾಡಲು ರಾಮಸೇತು ಎಂಬ ಕನ್ನಡ ಚಿತ್ರ ನಿರ್ಮಿಸಿ ಕೋಟ್ಯಾಂತರ ರೂಪಾಯಿ ನಷ್ಟವನ್ನು ಅನುಭವಿಸಿದ್ದರು.

ಇದನ್ನ ಮತ್ತೆ ಗಳಿಸಬೇಕು ಎಂದು ಚಿತ್ರ ನಿರ್ಮಾಪಕ ಎಸ್. ಕುಮಾರ್ ಅವರ ಪತ್ನಿ ಎಸ್. ಶಾರದ ಹಾಗೂ ಬಿಬಿಎಂಪಿ ಗುತ್ತಿಗೆದಾರರಾದ ಎಚ್. ಕುಮಾರ್ ಅವರ ಪತ್ನಿ  ಬಿ.ಎಂ.ಧನಲಕ್ಷ್ಮಿ  ಅವರಿಗೆ ತಮ್ಮ ಮೀನು ವ್ಯವಹಾರಕ್ಕೆ ಬಂಡವಾಳ ಹೂಡುವಂತೆ ಮನವೋಲಿಸಿದ್ದಾರೆ. ಇದರಿಂದ ಸುಮಾರು 60ಲಕ್ಷ ಹಣ ಸಂಗ್ರಹಿಸಿ, ಹಣವನ್ನು  ವಾಪಸ್ ನೀಡದೆ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಎಸ್.ಕುಮಾರ್ ಮತ್ತು ಅವರ ಪಾಲುದಾರರು ಹಣವನ್ನು ಕೇಳಿದ್ದಕ್ಕೆ, ಆರೋಪಿಗಳು ರೌಡಿಗಳನ್ನು ಬಿಟ್ಟು ಕೊಲೆ ಮಾಡಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರು. ಇದರಿಂದ ಕುಮಾರ್ ನ್ಯಾಯಲಯದಲ್ಲಿ ದೂರು ನೀಡಿದ್ದರು.
ದಿನೇಶ್ ರೆಡ್ಡಿ ಹಾಗೂ ರಾಮರೆಡ್ಡಿ ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿಟ್ಟಿದ್ದು, ರಾಮರೆಡ್ಡಿ ಮೇಲೆ ತಮಿಳುನಾಡು, ಆಂದ್ರಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಚೆಕ್‌ಬೌನ್ಸ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಟಿ.ಜಿ ರಾಮರೆಡ್ಡಿ ತನ್ನ ಆರ್.ಡಿ.ಜೆ  ಸೀ ಫುಡ್ ಕಚೇರಿಯ ಮೇಲಿನ ಕಟ್ಟಡದಲ್ಲಿ ಲಾಡ್ಜ್ ನಡೆಸುತ್ತಿದ್ದು ಅದರ ಹೆಸರನ್ನು ಅನುಗ್ರಹ ಲಾಡ್ಜ್ ಎಂದು ಬದಲಾಯಿಸಿ, ಕೆಲಸ ಕೊಡಿಸುವ ನೆಪದಲ್ಲಿ ಬಾಂಗ್ಲಾದೇಶ ಮತ್ತಿತರ ಕಡೆಗಳಿಂದ ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪುಲಿಕೇಶಿ ನಗರ ಉಪವಿಭಾಗದ ಎಸಿಪಿ ಶಿವಮೂರ್ತಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಕೆ.ಎಸ್. ವೆಂಕಟೇಶ ನಾಯ್ಡು ಮತ್ತು ಇತರ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.