ADVERTISEMENT

ವಕೀಲರ ಪರಿಷತ್ ಚುನಾವಣೆ ಇಂದಿನಿಂದ ಮತ ಎಣಿಕೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 19:30 IST
Last Updated 16 ಏಪ್ರಿಲ್ 2018, 19:30 IST

ಬೆಂಗಳೂರು: ರಾಜ್ಯ ವಕೀಲರ ಪರಿಷತ್‌ ಚುನಾವಣೆಯ ಮತ ಎಣಿಕೆ ಆರಂಭಿಸಲು ವಿಶೇಷ ಸಮಿತಿ ನಿರ್ಧರಿಸಿದೆ.

ವಿಶೇಷ ಸಮಿತಿ ಅಧ್ಯಕ್ಷರೂ ಆದ ಅಡ್ವೊಕೇಟ್ ಜನರಲ್ ಎಂ.ಆರ್‌.ನಾಯಕ್‌ ಅಧ್ಯಕ್ಷತೆಯಲ್ಲಿ ಸೇರಿದ್ದ ಹಿರಿಯ ವಕೀಲರಾದ ಪಿ.ಎಸ್.ರಾಜಗೋಪಾಲ್ ಅವರನ್ನೊಳಗೊಂಡ ಸಭೆ ಮತ ಎಣಿಕೆ ಆರಂಭಿಸುವಂತೆ ಚುನಾವಣಾ ಅಧಿಕಾರಿಗೆ ಸೋಮವಾರ ನಿರ್ದೇಶಿಸಿದೆ.

‘ಈ ನಿರ್ದೇಶನದ ಅನ್ವಯ ಎಣಿಕೆಯನ್ನು ಮಂಗಳವಾರ (ಏ.17) ಬೆಳಿಗ್ಗೆ 9 ಗಂಟೆಯಿಂದ ಆರಂಭಿಸಲಾಗುವುದು. ಮತ ಪೆಟ್ಟಿಗೆಗಳನ್ನು ಇರಿಸಿರುವ ಕರ್ನಾಟಕ ಸರ್ಕಾರಿ ಸಚಿವಾಲಯ ಕ್ಲಬ್‌ನಲ್ಲಿ ಈ ಎಣಿಕೆ ನಡೆಯಲಿದೆ’ ಎಂದು ಚುನಾವಣಾ ಅಧಿಕಾರಿಯೂ ಆದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಜಿ.ಶಿವಣ್ಣ ತಿಳಿಸಿದ್ದಾರೆ.

ADVERTISEMENT

‘ಎಣಿಕೆ ಉಸ್ತುವಾರಿಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರನ್ನೂ ಆಹ್ವಾನಿಸಲಾಗಿದೆ’ ಎಂದು ಶಿವಣ್ಣ ಹೇಳಿದ್ದಾರೆ.

ರಾಜ್ಯ ವಕೀಲರ ಪರಿಷತ್‌ನ 25 ಪದಾಧಿಕಾರಿಗಳ ಆಯ್ಕೆಗೆ 2018ರ ಮಾರ್ಚ್‌ 27ರಂದು ಚುನಾವಣೆ ನಡೆದಿತ್ತು.

‘ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಸ್ವರ್ಧಿಯೂ ಆದ ವಕೀಲ ಎಚ್‌.ಆರ್.ದುರ್ಗಾಪ್ರಸಾದ್ ಭಾರತೀಯ ವಕೀಲರ ಪರಿಷತ್‌ಗೆ ದೂರು ನೀಡಿದ್ದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನೇತೃತ್ವದ ಭಾರತೀಯ ವಕೀಲರ ಪರಿಷತ್‌ನ ಚುನಾವಣಾ ನ್ಯಾಯಮಂಡಳಿ ಈ ಅರ್ಜಿ ವಿಚಾರಣೆ ನಡೆಸಿ, ಮತ ಎಣಿಕೆಗೆ ಮಧ್ಯಂತರ ತಡೆ ನೀಡಿತ್ತು.

‘ಮತ ಪೆಟ್ಟಿಗೆಗಳನ್ನು ಪರಿಶೀಲಿಸಿ ವಸ್ತುಸ್ಥಿತಿ ವರದಿ ಸಲ್ಲಿಸಿ ಮತ್ತು ಈ ಸಂಬಂಧ ವೀಕ್ಷಕರನ್ನಾಗಿ ನಿವೃತ್ತ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರನ್ನು ನೇಮಿಸಲಾಗಿದೆ’ ಎಂದು ಆದೇಶಿಸಿ ಚುನಾವಣಾ ಅಧಿಕಾರಿಗೆ ನೋಟಿಸ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.