ADVERTISEMENT

ವಕ್ಫ್ ಆಸ್ತಿ ಬಚಾವೋ ಆಂದೋಲನಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಬೆಂಗಳೂರು: `ವಕ್ಫ್ ಆಸ್ತಿ ಬಚಾವೋ~ ಆಂದೋಲನವನ್ನು ಈ ತಿಂಗಳ ಅಂತ್ಯದೊಳಗೆ ಬೀದರ್‌ನಿಂದ ಬೆಂಗಳೂರು ವರೆಗೆ ಕೈಗೊಳ್ಳಲು ಅಲ್ಪಸಂಖ್ಯಾತ ಮೋರ್ಚಾವು ಮುಂದಾಗಿದೆ.

ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ನಿಜಾಮುದ್ದೀನ್ ಎಫ್. ಮೌಸೀನ್ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, `ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ ನೀಡಿರುವ ವರದಿ ಅನ್ವಯ ರಾಜ್ಯ ವಕ್ಫ್  ಮಂಡಳಿಯ 2 ಲಕ್ಷ ಕೋಟಿಗಳ ಆಸ್ತಿ ಕಬಳಿಕೆಯ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು~ ಎಂದು ಒತ್ತಾಯಿಸಿದರು.

`ಈ ಕೂಡಲೇ ಮುಖ್ಯಮಂತ್ರಿ ಅವರು ಪ್ರಕರಣವನ್ನು ಸದನದಲ್ಲಿ ಚರ್ಚಿಸಲು ಅವಕಾಶ ನೀಡಿ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

`ಜನರಿಗೆ ವಕ್ಫ್  ಮಂಡಳಿಯಲ್ಲಿ ನಡೆದಿರುವ ಅಕ್ರಮಗಳನ್ನು ತಿಳಿಸಲು ಆಂದೋಲನ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು~ ಎಂದರು.

`ವಕ್ಫ್ ಮಂಡಳಿ ಆದಾಯ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಉಪಯೋಗವಾಗಬೇಕಿತ್ತು. ಕೇಂದ್ರ ಮತ್ತು ರಾಜ್ಯ ಸಚಿವರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ~ ಎಂದು ಅವರು ಆರೋಪಿಸಿದರು.

`ವಕ್ಫ್ ಆಸ್ತಿ ಕಬಳಿಕೆ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಬಣ್ಣ ಬಯಲಾಗಿದೆ. ಬಡ ಮುಸಲ್ಮಾನರಿಗೆ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ದ್ರೋಹ ಮಾಡಲಾಗಿದೆ. ಇದನ್ನು ಬೃಹತ್ ಮಟ್ಟದಲ್ಲಿ ಪ್ರತಿಭಟಿಸಲಾಗುವುದು~ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.