ADVERTISEMENT

ವಚನಕಾರರ ವಿಚಾರ ಅವಗಣನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST
ವಚನಕಾರರ ವಿಚಾರ ಅವಗಣನೆ
ವಚನಕಾರರ ವಿಚಾರ ಅವಗಣನೆ   

ಬೆಂಗಳೂರು: `ವಿದೇಶದಲ್ಲಿ ಬಸವಣ್ಣ ಅವರ ವಿಚಾರಧಾರೆಗಳ ಪ್ರಭಾವಿತರಾಗುವವರ ಸಂಖ್ಯೆ ಹೆಚ್ಚಿದೆ. ಆದರೆ ನಮ್ಮಲ್ಲಿ ಅವರ ವಿಚಾರಧಾರೆಗಳನ್ನು ನೆನಪು ಮಾಡಿಕೊಳ್ಳುತ್ತಿಲ್ಲ~ ಎಂದು ಸಂಸದ ಎನ್. ಧರ್ಮಸಿಂಗ್ ಬೇಸರ ವ್ಯಕ್ತಪಡಿಸಿದರು.

ನಗರದ ಕೊಳದ ಮಠದ ಆಶ್ರಯದಲ್ಲಿ ಮಠದಲ್ಲಿ ಗುರುವಾರ ನಡೆದ ಮಹಾಮಾತೆ ಚಿನ್ಮಯಿ ಮಾತೃಶ್ರೀ ಶಿವಮ್ಮ ಅವರ 41ನೇ ವಾರ್ಷಿಕ ಸಂಸ್ಮರಣೆ, ರೇಣುಕ, ಬಸವ ಮತ್ತು ಅಕ್ಕಮಹಾದೇವಿ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ `ಅಲ್ಲಮಶ್ರೀ~ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

`ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಸಮಾಜ ಸುಧಾರಕರ ವಿಚಾರಧಾರೆಗಳನ್ನು ಮರೆಯತ್ತಿದ್ದೇವೆ. ಈ ನಿಟ್ಟಿನಲ್ಲಿ ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ವಚನಕಾರರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಅವರು ಕಿವಿಮಾತು ಹೇಳಿದರು.

ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಆಶೀರ್ವಚನ ನೀಡಿ, `ಬೇರೆ ಯಾವ ಭಾಷೆಯಲ್ಲೂ ಕನ್ನಡದಷ್ಟು ವೈಶಿಷ್ಟ್ಯಪೂರ್ಣವಾದ ಸಾಹಿತ್ಯ ಇಲ್ಲ. ಕನ್ನಡದ ಸಾಹಿತ್ಯ ಕಂಪು ವಿಶ್ವದೆಲ್ಲೆಡೆ ಪಸರಿಸಿದೆ. ಕನ್ನಡನಾಡು ಸರ್ವಧರ್ಮಗಳ ಬೀಡು. ರಾಜ್ಯದಲ್ಲಿ ನಿರ್ಮಾಣವಾಗಿರುವ ರಾಜಕೀಯ ಅರಾಜಕತೆ ಮಾಯವಾಗಿ ಧರ್ಮದ ಜ್ಯೋತಿ ಮತ್ತೆ ಬೆಳಗಿ ಬರಬೇಕು~ ಎಂದರು.

`ಕೊಳದ ಮಠಕ್ಕೆ ನಗರದಲ್ಲಿ 1,200 ಎಕರೆ ಜಾಗ ಇತ್ತು. 10 ಎಕರೆಯನ್ನು ಮಾತ್ರ ಮಠಕ್ಕೆ ಉಳಿಸಿಕೊಂಡು ಉಳಿದುದನ್ನು ಸಮಾಜಕ್ಕೆ ದಾನ ಮಾಡಲಾಗಿದೆ. ರಾಜ್ಯ ಸರ್ಕಾರ ಮಠಗಳಿಗೆ ನೆರವು ನೀಡುತ್ತಿದೆ. ಕೊಳದ ಮಠದಿಂದ ಸಮಾಜಕ್ಕೇ ಕೊಡುಗೆ ನೀಡಲಾಗುತ್ತಿದೆ. 108 ಮಂದಿ ಸಾಧಕರ ಭಾವಚಿತ್ರ ಹೊಂದಿರುವ ಮಹಾದ್ವಾರವನ್ನು ಮಠದ ಮುಂಭಾಗದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು~ ಎಂದು ಅವರು ಘೋಷಿಸಿದರು.

ಚನ್ನಗಿರಿಯ ಶಿವಲಿಂಗೇಶ್ವರಮಠದ ಜಯದೇವ ಸ್ವಾಮೀಜಿ, ಕನಕಪುರ ಮರಳೆಗವಿಮಠದ ಇಮ್ಮಡಿ ಶಿವರುದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನವದೆಹಲಿಯ ಭಾರತ ಏಕತಾ ಆಂದೋಲನದ ಕಾರ್ಯದರ್ಶಿ ಮಹದೇವ್ ಹೊರಟ್ಟಿ ಅಭಿನಂದನಾ ಭಾಷಣ ಮಾಡಿದರು.

ಕೃಷಿ ಮಾರುಕಟ್ಟೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ. ಸೋಮಶೇಖರ್, ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ, ಕೆನರಾ ಬ್ಯಾಂಕ್ ನಿವೃತ್ತ ನಿರ್ದೇಶಕ ನರೇಂದ್ರ ಕುಮಾರ್, ಭಾರತೀಯ ವಿಮಾನಯಾನ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥೆ ಸರಿತ ನರೇಂದ್ರ ಕುಮಾರ್, ಗುರುಶ್ರೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಬಿ.ಗಂಗಾಧರ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.