ADVERTISEMENT

ವರ್ತಕರಿಂದ ವಂಚನೆ: ನೇಕಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ಬೆಂಗಳೂರು: ನೇಕಾರರಿಂದ ಜವಳಿ ಖರೀದಿಸಿ ಹಣ ನೀಡದೆ ವಂಚಿಸಿದ ವರ್ತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ದಿ ಮೈಸೂರು ಪವರ್‌ಲೂಂ ಸಿಲ್ಕ್ ಮ್ಯಾನುಫ್ಯಾಕ್ಚರರ್ಸ್‌ ಕೋ-ಆಪರೇಟಿವ್ ಸೊಸೈಟಿ ಸದಸ್ಯರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ಅಧ್ಯಕ್ಷ ಎ.ಎಲ್.ಜಯರಾಂ ಮಾತನಾಡಿ, `ನೇಕಾರರು ನೇಯ್ದ ರೂ 3 ಕೋಟಿ  ಮೌಲ್ಯದ ಸೀರೆಗಳನ್ನು ಅವಿನ್ಯೂ ರಸ್ತೆಯಲ್ಲಿರುವ ಜವಳಿ ವ್ಯಾಪಾರಿಯೊಬ್ಬರಿಗೆ ಸರಬರಾಜು ಮಾಡಿದ್ದರು. ಆದರೆ, ಆ ವರ್ತಕರು ಇಷ್ಟು ದಿನ ಹಣ ನೀಡದೆ ಸತಾಯಿಸುತ್ತಿದ್ದರು. ಈಗ ಅಂಗಡಿ ಬಾಗಿಲು ಮುಚ್ಚಿಕೊಂಡು ರಾಜಸ್ತಾನಕ್ಕೆ ಹೋಗಿದ್ದಾರೆ.
 
ಅವರು ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿವೆ. ಇದರಿಂದ ನೇಕಾರರಿಗೆ ದಿಕ್ಕು ತೋಚದಂತಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇವೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ನೇಕಾರರಿಗೆ ನ್ಯಾಯ ಒದಗಿಸಬೇಕು~ ಎಂದು ಒತ್ತಾಯಿಸಿದರು.

`ಮಾರುಕಟ್ಟೆಯ ಕೆಲ ವರ್ತಕರು ನೇಕಾರರಿಗೆ ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ನೇಕಾರರ ಕುಟುಂಬ, ಜೀವನೋಪಾಯಕ್ಕಾಗಿ ಮಾಡಿಕೊಂಡಿದ್ದ ಸಾಲವನ್ನು ತೀರಿಸಲಾಗದೆ ಬೀದಿಪಾಲಾಗಿದೆ. ಕಳೆದ ತಿಂಗಳು ಬನ್ನೇರುಘಟ್ಟ ರಸ್ತೆಯ ವೀವರ್ಸ್‌ ಕಾಲೊನಿಯಲ್ಲಿ ನೇಕಾರ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ.

ಇಂತಹ ಪರಿಸ್ಥಿತಿಯಲ್ಲಿ ವರ್ತಕರು ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದು ಪರಾರಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಸರ್ಕಾರ ಮಾನವೀಯತೆ ದೃಷ್ಟಿಯಿಂದಾದರೂ ನೇಕಾರರ ನೆರವಿಗೆ ಬರಬೇಕು~ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಾಸಕ ಹೇಮಚಂದ್ರ ಸಾಗರ್, ಬಿಬಿಎಂಪಿ ಸದಸ್ಯರಾದ ಶಿವಕುಮಾರ್, ಧನರಾಜ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.