ADVERTISEMENT

ವರ್ತೂರು–ಸರ್ಜಾಪುರ ರಸ್ತೆ ವಿಸ್ತರಣೆಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2017, 19:29 IST
Last Updated 9 ಡಿಸೆಂಬರ್ 2017, 19:29 IST
ಕಾಮಗಾರಿ ಅನುಕೂಲಕ್ಕಾಗಿ ಕೋಡಿ ನೀರಿನ ವೇಗ ತಗ್ಗಿಸಲು ಮಣ್ಣು ಹಾಕಿರುವುದು
ಕಾಮಗಾರಿ ಅನುಕೂಲಕ್ಕಾಗಿ ಕೋಡಿ ನೀರಿನ ವೇಗ ತಗ್ಗಿಸಲು ಮಣ್ಣು ಹಾಕಿರುವುದು   

ಬೆಂಗಳೂರು: ವರ್ತೂರು ಗ್ರಾಮದಿಂದ ಸರ್ಜಾಪುರ ರಸ್ತೆಯವರೆಗಿನ ರಸ್ತೆಯನ್ನು ₹70 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡಲು ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗವು ಪ್ರಸ್ತಾವ ಸಿದ್ಧಪಡಿಸುತ್ತಿದೆ.

‘ವರ್ತೂರು ಕೆರೆ ಕೋಡಿಯಿಂದ ವರ್ತೂರು ಗ್ರಾಮದವರೆಗಿನ 1.4 ಕಿ.ಮೀ. ರಸ್ತೆಯನ್ನು ₹30 ಕೋಟಿ ವೆಚ್ಚದಲ್ಲಿ ವಿಸ್ತರಿಸುತ್ತೇವೆ. ಈ ಪೈಕಿ ವರ್ತೂರು ಕೆರೆ ಕೋಡಿಯ ಸೇತುವೆಯನ್ನು ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ’ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡನೇ ಹಂತದಲ್ಲಿ ವರ್ತೂರಿನಿಂದ ಸರ್ಜಾಪುರ ರಸ್ತೆಯವರೆಗಿನ 5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡಲು ಉದ್ದೇಶಿಸಿದ್ದೇವೆ. ವರ್ತೂರಿನಿಂದ ಗುಂಜೂರುವರೆಗಿನ ರಸ್ತೆಯು ಸ್ವಲ್ಪ ಅಗಲವಾಗಿದೆ. ಆದರೆ, ಅಲ್ಲಿಂದ ಸರ್ಜಾಪುರದವರೆಗೆ 30 ಅಡಿ ಅಗಲದ ರಸ್ತೆ ಇದೆ. ಹೀಗಾಗಿ ಇಡೀ ರಸ್ತೆಯನ್ನು 100 ಅಡಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ADVERTISEMENT

‘ಈಗಾಗಲೇ ಸರ್ವೆ ಕಾರ್ಯ ಆರಂಭವಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ ಬಳಿಕ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆ’ ಎಂದರು.

‘ಈ ರಸ್ತೆಯ ಕೆಲ ಭಾಗವು ಪಾಲಿಕೆ ವ್ಯಾಪ್ತಿಗೆ ಸೇರುವುದಿಲ್ಲ. ಆ ಭಾಗದಲ್ಲೂ ಪಾಲಿಕೆ ವತಿಯಿಂದಲೇ ರಸ್ತೆ ನಿರ್ಮಿಸುವ ಉದ್ದೇಶವಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಜತೆ ಮಾತುಕತೆ ನಡೆಸುತ್ತೇವೆ’ ಎಂದು ತಿಳಿಸಿದರು.

‘ವರ್ತೂರು–ಸರ್ಜಾಪುರ ರಸ್ತೆ ಮಾರ್ಗದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಕಿರಿದಾಗಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವರ್ತೂರು ಕೆರೆ ಏರಿಯ ಮೇಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಸ್ತೆ ಅಗಲಗೊಳಿಸಲು ಮುಂದಾಗಿದ್ದೇವೆ’ ಎಂದು ಹೇಳಿದರು.

ಕಾಮಗಾರಿ ಸ್ಥಗಿತಕ್ಕೆ ಸೂಚನೆ: ವರ್ತೂರು ಕೆರೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿಗೆ ಬರುತ್ತದೆ. ಆದರೆ, ಯಾವುದೇ ಅನುಮತಿ ಪಡೆಯದೇ ಈ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ ಎಂದು ಆರೋಪಿಸಿರುವ ಬಿಡಿಎ, ಈ ಸಂಬಂಧ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಎಲ್‌ಸಿಡಿಎ) ಪತ್ರ ಬರೆದಿತ್ತು.

‘ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಬಿಡಿಎ ಹಾಗೂ ಕೆಎಲ್‌ಸಿಡಿಎ ಅನುಮತಿ ಪಡೆಯಬೇಕಿತ್ತು. ಯಾವುದೇ ಮಾಹಿತಿ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ. ಅವಶೇಷಗಳನ್ನು ಕೆರೆಗೆ ಹಾಕಲಾಗುತ್ತಿದೆ. ಇದರಿಂದ ಜಲಮೂಲ ಕಲುಷಿತಗೊಳ್ಳುತ್ತಿದೆ. ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು’ ಎಂದು ಕೆಎಲ್‌ಸಿಡಿಎ ಪಾಲಿಕೆಗೆ ಪತ್ರ ಬರೆದಿದೆ.

‘ಈ ಕೆರೆ ಬಿಡಿಎ ವ್ಯಾಪ್ತಿಗೆ ಬಂದರೂ ರಸ್ತೆಯನ್ನು ಅಭಿವೃದ್ಧಿ ಪಡಿಸುವುದು ಪಾಲಿಕೆಯ ಜವಾಬ್ದಾರಿ. ಜನರ ಅನುಕೂಲಕ್ಕಾಗಿ ರಸ್ತೆಯನ್ನು ವಿಸ್ತರಣೆ ಮಾಡುತ್ತಿದ್ದೇವೆ. ಆದರೆ, ಬಿಡಿಎ ಅಧಿಕಾರಿಗಳು ವಿನಾಕಾರಣ ಕೆಎಲ್‌ಸಿಡಿಎಗೆ ಪತ್ರ ಬರೆದಿದ್ದಾರೆ’ ಎಂದು ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಜಲಮಂಡಳಿ ಹಾಗೂ ಬೆಸ್ಕಾಂನವರು ಪಾಲಿಕೆಯ ಅನುಮತಿ ಪಡೆಯದೇ ಸಾಕಷ್ಟು ರಸ್ತೆಗಳನ್ನು ಅಗೆಯುತ್ತಾರೆ. ಬಳಿಕ, ರಸ್ತೆಗಳನ್ನು ಸರಿಯಾಗಿ ಮುಚ್ಚುವುದಿಲ್ಲ. ರಸ್ತೆ ಗುಂಡಿ ಬೀಳುವುದರಿಂದ ಜನರು ಪಾಲಿಕೆಯನ್ನು ದೂರುತ್ತಾರೆ. ಯಾರೋ ಮಾಡುವ ತಪ್ಪಿಗೆ ನಾವು ಬೈಗುಳ ಕೇಳಬೇಕು’ ಎಂದು ಬೇಸರದಿಂದ ನುಡಿದರು.

‘ರಸ್ತೆ ವಿಸ್ತರಣೆಗೆ ಅನುಮತಿ ನೀಡುವಂತೆ ಬಿಡಿಎಗೆ ಪತ್ರ ಬರೆಯುತ್ತಿದ್ದೇವೆ. ಈಗ ಮಣ್ಣಿನ ಪರೀಕ್ಷೆ ನಡೆಸುತ್ತಿದ್ದೇವೆ. ಅನುಮತಿ ಸಿಕ್ಕ ಬಳಿಕ ರಸ್ತೆ ಅಗಲ ಮಾಡುತ್ತೇವೆ’ ಎಂದರು.

‘ಕೆರೆಗೆ ಕಟ್ಟಡ ಅವಶೇಷ ಹಾಕಿಲ್ಲ’

‘ವರ್ತೂರು ಕೆರೆಗೆ ಯಾವುದೇ ಅವಶೇಷಗಳನ್ನು ಹಾಕಿಲ್ಲ. ಬೇಲಿಯೇ ಎದ್ದು ಹೊಲ ಮೇಯುತ್ತದೆಯೇ’ ಎಂದು ಸೋಮಶೇಖರ್‌ ಪ್ರಶ್ನಿಸಿದರು.

‘ಹೊರಗಿನಿಂದ ಕೆಲವರು ಕಟ್ಟಡ ಅವಶೇಷಗಳನ್ನು ತಂದು ಕೆರೆ ಭಾಗದಲ್ಲಿ ಹಾಕುತ್ತಿದ್ದಾರೆ. ಈ ಬಗ್ಗೆ ನಿಗಾ ವಹಿಸಲು ಸಹಾಯಕ ಎಂಜಿನಿಯರ್‌ ಅವರನ್ನು ನೇಮಿಸಿದ್ದೇವೆ. ಕೆರೆಯ ಜಲಮೂಲಕ್ಕೆ ಯಾವುದೇ ಧಕ್ಕೆ ಆಗದಂತೆ ರಸ್ತೆ ವಿಸ್ತರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.