ADVERTISEMENT

ವಸಂತಾಗಮನಕ್ಕೆ ಹೆಜ್ಜೆ ಗೆಜ್ಜೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:35 IST
Last Updated 25 ಮಾರ್ಚ್ 2012, 19:35 IST

ಬೆಂಗಳೂರು: ವಸಂತನ ಆಗಮನಕ್ಕೆ ಪ್ರಕೃತಿಯು ಹೂ, ಚಿಗುರುಗಳೊಡನೆ ಸ್ವಾಗತ ಕೋರಿದರೆ ಅಲ್ಲಿ ಸಂಗೀತ ನೃತ್ಯಗಳ ಸಂಗಮ ವಸಂತನ ಬರುವಿಕೆಗೆ ನಾದ ಬೀದಿಯನ್ನು ಸೃಷ್ಟಿಸಿತ್ತು. ಕಂಠಗಳು ಹಾಗೂ ವಾದ್ಯಗಳು ರಾಗ, ತಾಳ, ಲಯ ಭೇದ ಮರೆತು ಏಕವಾದರೆ, ಗೀತೆಯೊಂದಿಗೆ ಮೂಡುತ್ತಿದ್ದ ಚಿತ್ರದ ರೇಖೆಗಳು ನೋಡುಗರ ಕಣ್ಣು ಮತ್ತು ಕವಿಗಳನ್ನು ಅದ್ವೈತದ ರಸಾನುಭೂತಿಯಲ್ಲಿ ಮಿಂದೇಳುವಂತೆ ಮಾಡಿದವು. ನೃತ್ಯ ರೂಪಕದ ಹೆಜ್ಜೆ ಗೆಜ್ಜೆಗಳು ನೋಡುಗರ ಕಣ್ಮನಗಳಲ್ಲಿ ಅಚ್ಚಳಿಯದಂತೆ ಉಳಿದವು. ಅಲ್ಲಿನ ನಾದ ನೃತ್ಯ ಲೋಕದ ವೈಭವಕ್ಕೆ ವಸಂತನೇ ಮನದಣಿಯೆ ಮಣಿಯುವಂತಿತ್ತು..!

ಬೆಂಗಳೂರು ದೂರದರ್ಶನ ಕೇಂದ್ರವು ಯುಗಾದಿಯ ಪ್ರಯುಕ್ತ ರಾಜಭವನದ ಗಾಜಿನಮನೆಯಲ್ಲಿ ಭಾನುವಾರ ಆಯೋಜಿಸಿದ್ದ `ಬಾರೋ ವಸಂತ~ ಸಂಗೀತ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಕಂಡು ಬಂದ ಅಪೂರ್ವ ನೋಟ ಇದು.

ಕಾರ್ಯಕ್ರಮವು ಪಳನಿವೇಲು ಅವರ ನಾದಸ್ವರ ಹಾಗೂ ರುದ್ರಪ್ಪ ಅವರ ಶಹನಾಯಿ ವಾದನದೊಂದಿಗೆ ಆರಂಭವಾಯಿತು. ರೇಖಾ ರಾಜು ಮತ್ತು ತಂಡದವರು ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರ `ಬಾರೋ ವಸಂತ ಬಾ~ ಗೀತೆಗೆ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು. ವಸಂತನ ಆಗಮನಕ್ಕಾಗಿ ಹೂಗಳ ಪಕಳೆಯನ್ನು ಹಿಡಿದ ವರ್ಣರಂಜಿತ ನೃತ್ಯ ನೋಡುಗರ ಮನ ಸೂರೆಗೊಂಡಿತು.

ಪಿ.ಎಸ್.ವಸಂತ, ರಮೇಶ್ ಚಂದ್ರ ಮತ್ತು ತಂಡದವರು ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರ ವಸಂತದ ಗೀತೆಗೆ ದನಿಯಾದರೆ, ವರ್ಣಚಿತ್ರ ಕಲಾವಿದ ಜಗದೀಶ್ ಅವರು ಹಾಡಿಗೆ ಚಿತ್ರದ ರೂಪು ನೀಡಿದರು. ಅನುರಾಧಾ ವಿಕ್ರಾಂತ್ ಮತ್ತು ತಂಡ `ನಂದನ ವಸಂತ~ ಗೀತೆಗೆ ನೃತ್ಯವನ್ನು ಪ್ರದರ್ಶಿಸಿದರು. ನಂತರ ನಡೆದ ಕಂಠ ಹಾಗೂ ವಾದ್ಯಗಳ ರಾಗ - ತಾಳ ತನಿ ಆವರ್ತವು ಕೇಳುಗರನ್ನು ನಾದಲೋಕದಲ್ಲಿ ತೇಲಿಸಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್, `ವಿವಿಧ ಧರ್ಮ ಹಾಗೂ ಜಾತಿಗಳ ಜನರನ್ನು ಹೊಂದಿದ್ದರೂ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಜಗತ್ತನ್ನೇ ಪ್ರೀತಿ ಹಾಗೂ ವಿಶ್ವಾಸಗಳಿಂದ ಕಾಣುವ ಭಾರತದ ಸಂಸ್ಕೃತಿಯು ಜಗತ್ತಿನಲ್ಲಿಯೇ ವಿಶಿಷ್ಟವಾದುದು. ಪ್ರಕೃತಿಯ ಆಗಮನವನ್ನು ಸ್ವಾಗತಿಸುವ ಇಂತಹ ಆಚರಣೆಗೆ ರಾಜಭವನ ವೇದಿಕೆಯಾಗಿದ್ದು ಸಂತೋಷ ತಂದಿದೆ~ ಎಂದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಜಗನ್ನಾಥ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 

 ಸಿಐಡಿಯ ಡಿಸಿಪಿ ರೂಪಕ್ ಕುಮಾರ್ ದತ್ತ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಷಿ, ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹ್ರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.