ADVERTISEMENT

ವಾಹನ ನಿರೀಕ್ಷಕರ ನೇಮಕಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ಬೆಂಗಳೂರು: ವೃತ್ತಿ ಶಿಕ್ಷಣ ನಿರ್ದೇಶನಾಲಯದ 35 ಮಂದಿ ಸಿಬ್ಬಂದಿಗೆ ಎರವಲು ಸೇವೆಯಡಿ ಸಾರಿಗೆ ಇಲಾಖೆಗೆ ಹೋಗುವಂತೆ ನೀಡಲಾಗಿರುವ ಆದೇಶಕ್ಕೆ  ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ವಾಹನ ನಿರೀಕ್ಷಕರ ನೇಮಕ ಪ್ರಕ್ರಿಯೆಗೂ ತಡೆಯಾಜ್ಞೆ ನೀಡಿದೆ.

ವಾಹನ ನಿರೀಕ್ಷಕರ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸತೀಶ್ ಕುಮಾರ್ ಕುಂಬ್ಳೆ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಧರ ರಾವ್ ಹಾಗೂ ನ್ಯಾಯಮೂರ್ತಿ ಬಿ.ವಿ. ಪಿಂಟೋ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ, ಈ ತಡೆಯಾಜ್ಞೆ ನೀಡಿದೆ.

ಕರ್ನಾಟಕ ಲೋಕಸೇವಾ ಆಯೋಗ 2006ರಲ್ಲಿ ಒಟ್ಟು 245 ಮಂದಿ ವಾಹನ ನಿರೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿತು. ಆ ಸಂದರ್ಭದಲ್ಲಿ ಸಾರಿಗೆ ಸಚಿವರಾಗಿದ್ದ ಎನ್. ಚೆಲುವರಾಯಸ್ವಾಮಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸದೆ, ಒಟ್ಟು 100 ಹುದ್ದೆಗಳನ್ನು ಕಡಿತಗೊಳಿಸಿದರು ಎಂದು ದೂರಲಾಗಿದೆ.

ಸಾರಿಗೆ ಸಚಿವ ಆರ್. ಅಶೋಕ ಅವರು ಕೂಡ ಪ್ರಭಾವ ಬೀರಿ, ತಮ್ಮ ಆಪ್ತರನ್ನು 2010ರಲ್ಲಿ ಈ ಹುದ್ದೆಗೆ ನೇಮಕ ಮಾಡಿಸಿದ್ದಾರೆ ಎಂಬುದು ಅರ್ಜಿದಾರರ ಆರೋಪ. ಪ್ರಕರಣ ಇತ್ಯರ್ಥ ಆಗುವವರೆಗೆ ಯಾವುದೇ ನೇಮಕ ಮಾಡಿಕೊಳ್ಳದಿರುವಂತೆ ಆದೇಶಿಸಿ, ವಿಚಾರಣೆ ಮುಂದೂಡಲಾಯಿತು.

ಕಸ ವಿಲೇವಾರಿಗೆ ಆರು ಸ್ಥಳ: ಬೆಂಗಳೂರಿನ ತ್ಯಾಜ್ಯವನ್ನು ವಿಲೇವಾರಿ ಮಾಡಲು 6 ಕಡೆ ಸ್ಥಳ ಗುರುತಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿತು.

ಚಲ್ಲಘಟ್ಟ (10 ಎಕರೆ), ಬಾಗಲೂರು (13 ಎಕರೆ), ಸುಂಕದಕಟ್ಟೆ (15 ಎಕರೆ), ಯಲಚಗುಪ್ಪೆ (10 ಎಕರೆ), ಹಿಂಡಲವಾಡಿ (11 ಎಕರೆ), ಕಳ್ಳಬಾಳು (63 ಎಕರೆ) ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳ ಇದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಈ ಪ್ರದೇಶಗಳಿಗೆ ಭೇಟಿ ನೀಡಿ, ಅನುಮತಿ ನೀಡಿದ ನಂತರ ಅಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪಾಲಿಕೆ ವಿವರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.