ADVERTISEMENT

ವಾಹನ ನಿಲುಗಡೆ ನೀತಿ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 20:06 IST
Last Updated 23 ಸೆಪ್ಟೆಂಬರ್ 2013, 20:06 IST

ಬೆಂಗಳೂರು: ಬಿಬಿಎಂಪಿ ಜಾರಿಗೆ ತರಲು ಉದ್ದೇಶಿಸಿರುವ ನೂತನ ವಾಹನ ನಿಲುಗಡೆ ನೀತಿಯನ್ನು ವಿರೋಧಿಸಿ ಬೆಂಗಳೂರು ಉಳಿಸಿ ಸಮಿತಿಯ ಸದಸ್ಯರು ನಗರದ  ಮೈಸೂರು ಬ್ಯಾಂಕ್ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿಯ ಸಹ ಸಂಚಾಲಕ ವಿ.ಎನ್. ರಾಜಶೇಖರ್, ‘ನೂತನ ವಾಹನ ನಿಲುಗಡೆ ನೀತಿ ಜಾರಿಗೆ ತಂದರೆ ಮಧ್ಯಮ ವರ್ಗದವರ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಹೀಗಾಗಿ ನೂತನ ವಾಹನ ನಿಲುಗಡೆ ನೀತಿ ಜಾರಿ ವಿಚಾರವನ್ನು ಬಿಬಿಎಂಪಿ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ನಗರದ ಎಲ್ಲಾ ಪ್ರಮುಖ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣಗಳ ತಳ ಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದರೆ  ನಿಲುಗಡೆ ಸಮಸ್ಯೆ ತಕ್ಕಮಟ್ಟಿಗೆ ಕಡಿಮೆಯಾಗುತ್ತದೆ. ಆದರೆ, ಬಹುತೇಕ ವಾಣಿಜ್ಯ ಸಂಕೀರ್ಣಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲ. ಮಾಲ್‌ಗಳ ತಳಮಹಡಿಯಲ್ಲಿ ಹೋಟೆಲ್‌, ರೆಸ್ಟೋರೆಂಟ್‌ಗಳು ನಡೆಯುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳದ ಬಿಬಿಎಂಪಿ, ಆದಾಯದ ಗಳಿಕೆಯ ಕಾರಣ ನೀಡಿ ವಾಹನ ನಿಲುಗಡೆ ಶುಲ್ಕ ಹೆಚ್ಚಿಸುವುದು ಸರಿಯಲ್ಲ’ ಎಂದರು.

‘ವಾಹನ ನಿಲುಗಡೆ ಶುಲ್ಕದಿಂದ ವಾರ್ಷಿಕ ₨ 80 ಕೋಟಿ ಆದಾಯ ಬರುತ್ತದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಇದಕ್ಕಿಂತ ಹೆಚ್ಚಿನ ಆದಾಯ ವಾಹನ ನಿಲುಗಡೆಯ ಗುತ್ತಿಗೆದಾರರಿಗೆ ಹೋಗುತ್ತದೆ. ನೂತನ ವಾಹನ ನಿಲುಗಡೆ ನೀತಿಯಿಂದ ಬಿಬಿಎಂಪಿ ಹಗಲು ದರೋಡೆ ಮಾಡಲು ಮುಂದಾಗಿದೆ’ ಎಂದು ಹೇಳಿದರು.

ಶೇಷಾದ್ರಿಪುರದ ಹಿರಿಯ ನಾಗರಿಕ ಕೆ.ಎಸ್.ಎಸ್.ಅಯ್ಯಂಗಾರ್ ಮಾತನಾಡಿ, ‘ನಗರದ ಅನೇಕ ರಸ್ತೆಗಳು ಕಿರಿದಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡುವ ಬದಲು ಬೃಹತ್‌ ವಾಣಿಜ್ಯ ಸಂಕೀರ್ಣಗಳು, ಮಾಲ್‌ ಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲು ಬಿಬಿಎಂಪಿ ಚಿಂತಿಸಬೇಕು. ಅಲ್ಲದೆ, ಹೊಸದಾಗಿ ಇನ್ನಷ್ಟು ವಾಹನ ನಿಲುಗಡೆ ಸಂಕೀರ್ಣಗಳನ್ನು ನಿರ್ಮಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.