ADVERTISEMENT

ವಿಜ್ಞಾನ ತಂತ್ರಜ್ಞಾನ: 47 ಮಂದಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:25 IST
Last Updated 9 ಫೆಬ್ರುವರಿ 2012, 19:25 IST

ಬೆಂಗಳೂರು:  ವಿಜ್ಞಾನ ಮತ್ತು ತಂತ್ರಜ್ಞಾನ ಗುಣಮಟ್ಟದ ಸಂಶೋಧನೆಯ ವರ್ಧನೆ, ವೈಜ್ಞಾನಿಕ ಸಂಶೋಧನೆ, ಸೃಜನಶೀಲವಾಗಿ ವಿಜ್ಞಾನ ಬೋಧನೆ ಕೈಗೊಂಡ ಅಧ್ಯಾಪಕರು, ಉನ್ನತ ಶಿಕ್ಷಣ ಸಂಸ್ಥೆಗಳು  ಹಾಗೂ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸಿದ ವಿಜ್ಞಾನ ಸಂವಹನಕಾರರು ಸೇರಿದಂತೆ ಒಟ್ಟು 47 ಮಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹದ ವತಿಯಿಂದ ಗುರುವಾರ 2011-12ನೇ ಸಾಲಿನ ಪ್ರಶಸ್ತಿ ಹಾಗೂ ಅನುದಾನ ನೀಡಿ ಗೌರವಿಸಲಾಯಿತು.

ಸಾಂಸ್ಥಿಕ ಅನುದಾನ: ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗೆ ಪ್ರೋತಾಹ ನೀಡುವ ಸಲುವಾಗಿ ರಾಜ್ಯದ ಆಯ್ದ ಐದು ವಿಜ್ಞಾನ ಮತ್ತು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿ ಶಿಕ್ಷಣ ಸಂಸ್ಥೆಗೆ ವಾರ್ಷಿಕ 20 ಲಕ್ಷ ರೂಪಾಯಿಗಳ ಸಂಶೋಧನಾ ಅನುದಾನವನ್ನು ಮೂರು ವರ್ಷಗಳ ಅವಧಿಗೆ ನೀಡಲಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗೆ ಕಾಲೇಜುಗಳಲ್ಲಿ ಶ್ರೇಷ್ಠ ಕೇಂದ್ರಗಳನ್ನು ಸ್ಥಾಪಿಸುವುದು ಈ ಕಾರ್ಯಕ್ರಮದ ಉದ್ದೇಶ.

ಬಾಗಲಕೋಟೆಯ ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರಲ್ ಸೈನ್ಸ್, ಜಮಖಂಡಿಯ ಬಿಎಚ್‌ಎಸ್ ಕಲೆ, ವಾಣಿಜ್ಯ ಮತ್ತು ಟಿಜಿಪಿ ವಿಜ್ಞಾನ ಕಾಲೇಜು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಜಿಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ತಾಂತ್ರಿಕ ಕಾಲೇಜುಗಳು ಈ ಪ್ರಶಸ್ತಿ ಪಡೆದುಕೊಂಡವು.

10 ಶಿಕ್ಷಣ ಸಂಸ್ಥೆಗಳಿಗೆ ಪ್ರಶಸ್ತಿ: ವಿಜ್ಞಾನ ಶಿಕ್ಷಣದ ಸೃಜನಶೀಲ ಕೇಂದ್ರಗಳ ಸ್ಥಾಪನೆ ಮಾಡುವ ಉದ್ದೇಶದಿಂದ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನವನ್ನು ಸತತ ಮೂರು ವರ್ಷಗಳ ಅವಧಿಗೆ ಪಡೆಯಲಿರುವ ಈ ಕೆಳಗಿನ 10 ಶಿಕ್ಷಣ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾಲೇಜುಗಳಲ್ಲಿ ಸೌಲಭ್ಯಗಳನ್ನು ಉನ್ನತೀಕರಿಸಿ ಮೂಲ ವಿಜ್ಞಾನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಉದ್ದೇಶ.

ಬೆಂಗಳೂರಿನ ಮಲ್ಲೇಶ್ವರದ ಎಂಇಎಸ್ ಕಾಲೇಜು, ಕಾಡುಗೋಡಿಯ ಸತ್ಯಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್, ಎಚ್‌ಎಸ್‌ಆರ್ ಲೇಔಟ್‌ನ ಆಕ್ಸ್‌ಫರ್ಡ್ ವಿಜ್ಞಾನ ಕಾಲೇಜು, ಕರ್ನಾಟಕ ಪಶುಸಂಗೋಪನಾ, ಪ್ರಾಣಿ ಮತ್ತು ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಬೆಳಗಾವಿಯ ಫಾರ್ಮಸಿ ಕಾಲೇಜು, ಶಿವಮೊಗ್ಗದ ನ್ಯಾಷನಲ್ ಫಾರ್ಮಸಿ ಕಾಲೇಜು, ಬಾಗಲಕೋಟೆಯ ಹಾನಗಲ್ ಶ್ರೀ ಕುಮಾರೇಶ್ವರ ಫಾರ್ಮಸಿ ಕಾಲೇಜು, ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು.

ವೈಯಕ್ತಿಕ ಪ್ರಶಸ್ತಿಗಳು: ವಿಜ್ಞಾನ ಬೋಧನೆಯನ್ನು ಹೆಚ್ಚು ಕ್ರಿಯಾಶೀಲವನ್ನಾಗಿಸಿ ಸೃಜನಶೀಲ ಪ್ರಯತ್ನಗಳಿಂದ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಶ್ರೇಷ್ಠ ಕೊಡುಗೆ ನೀಡಿದ ಐವರು ವಿಜ್ಞಾನ ಸಂವಹನಕಾರರಿಗೆ 50 ಸಾವಿರ ರೂಪಾಯಿ ನಗದು ನೀಡಿ ಗೌರವಿಸಲಾಯಿತು.

ಕೋಲಾರದ ವಿ.ಎಸ್.ಎಸ್. ಶಾಸ್ತ್ರಿ, ಬೆಂಗಳೂರಿನ ಆರ್.ವಿ.ಎಂ. ಚೊಕ್ಕಲಿಂಗಂ, ಕೈವಾರ ಗೋಪಿನಾಥ್, ಮೈಸೂರಿನ ಎ.ಎಸ್. ಕಲ್ಯಾಣ ವೆಂಕಟ ಸುಬ್ರಮಣ್ಯಶರ್ಮ ಹಾಗೂ ಮೈಸೂರಿನ ಡಾ. ವಸಂತಕುಮಾರ ತಿಮಕಾಪುರ ಈ ಪ್ರಶಸ್ತಿ ಪಡೆದುಕೊಂಡರು.

ಯುವ ವಿಜ್ಞಾನಿಗಳಿಗೆ ಸಂಶೋಧನೆಗಾಗಿ ಮೂಲ ಧನ: ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಪದವಿ ಮಹಾವಿದ್ಯಾಲಯಗಳಲ್ಲಿ ವಿಜ್ಞಾನ ಬೋಧಕರಾಗಿ ಕಾರ್ಯನಿರ್ವಹಿಸುತ್ತಿರುವ 35 ವರ್ಷದೊಳಗಿನ ಯುವ ಸಂಶೋಧಕರಿಗೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ಕೈಗೊಂಡು ವಿಜ್ಞಾನ ಸಂಶೋಧನೆ ಬಲಪಡಿಸುವ ಉದ್ದೇಶದಿಂದ 17 ಮಂದಿ ಯುವ ಸಂಶೋಧಕರಿಗೆ 10 ಲಕ್ಷ ರೂಪಾಯಿ ಮೂಲಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಡಾ.ಎಲ್. ಪ್ರಿಯ, ಧಾರವಾಡದ ಡಾ. ದೇವರಾಜನ್ ತಂಗದುರೈ, ಮಣಿಪಾಲ್‌ನ ಡಾ. ಶ್ಯಾಮಪ್ರಸಾದ್ ಸಾಜನ್‌ಕಿಲ, ಶಿವಮೊಗ್ಗದ ಡಾ.ಬಿ.ಟಿ. ಪ್ರಭಾಕರ, ತುಮಕೂರಿನ ಡಾ.ಎಸ್. ನಾಗರಾಜು, ಮೈಸೂರಿನ ಡಾ.ಬಿ.ವೈ. ಸತೀಶಕುಮಾರ, ಬೆಂಗಳೂರಿನ ಡಾ.ಆರ್. ಕಾವ್ಯಶ್ರೀ, ಡಾ.ಬಿ.ಜಿ. ಹರೀಶ್, ಡಾ.ಎ.ವಿ. ರಘು, ತುಮಕೂರಿನ ಪ್ರೊ.ಟಿ.ಎನ್. ರಮೇಶ್, ವಿಜಾಪುರದ ಉಪನ್ಯಾಸಕ ಎಚ್.ಎಂ. ನಂಜಪ್ಪ, ಗುಲ್ಬರ್ಗದ ಉಪನ್ಯಾಸಕ ರಘುನಂದನ್ ದೇಶಪಾಂಡೆ, ಬೆಂಗಳೂರಿನ ಡಾ. ಬಸಪ್ಪ, ಡಾ.ಜಿ.ವರಪ್ರಸಾದ್, ಡಾ.ಎಚ್.ಎ. ಸಂಜಯ್, ಗುಲ್ಬರ್ಗದ ಪರಶುರಾಮ ಬನ್ನಿಗಿಡದ್, ಶಿವಮೊಗ್ಗದ ಡಾ.ಜೆ. ಮಂಜಣ್ಣ ಈ ಪ್ರಶಸ್ತಿಯನ್ನು ಪಡೆದುಕೊಂಡರು.

 ಶ್ರೇಷ್ಠ ಸಂಶೋಧನಾ ಪ್ರಬಂಧ ಪ್ರಶಸ್ತಿಗಳಿಗೆ ಆಯ್ಕೆಯಾದ ಸಂಶೋಧಕರು: ಶ್ರೇಷ್ಠ ಸಂಶೋಧನಾ ಪ್ರಬಂಧ ಪ್ರಶಸ್ತಿಗಳಿಗೆ ಆಯ್ಕೆಯಾದ 10 ಮಂದಿ ಸಂಶೋಧಕರಿಗೆ ತಲಾ ರೂ. 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಡಾ.ಸಿ.ಇ. ನಂಜುಂಡಪ್ಪ (ಬೆಂಗಳೂರು), ಡಾ.ಎಚ್. ನಾಗಭೂಷಣ (ತುಮಕೂರು), ಡಾ. ಶುಭ ಗೋಪಾಲ್ (ಮೈಸೂರು), ಡಾ.ಬಿ. ಮಧುಸೂದನ್ (ದಾವಣಗೆರೆ), ಡಾ.ಟಿ.ಬಿ. ಕರಿಗೌಡರ್ (ಗುಲ್ಬರ್ಗ), ಡಾ.ಎಚ್.ಎಸ್. ಅಪರ್ಣ (ಮೈಸೂರು), ಡಾ. ಪಾಂಡುರಂಗಪ್ಪ (ಬೆಂಗಳೂರು), ಡಾ. ಅರುಣ್ ಮೋಹನ್ ಇಸ್ಲೂರ್ (ಮಂಗಳೂರು), ಡಾ. ಸತೀಶ್‌ಕುಮಾರ್ ಅಡಿಗ (ಮಣಿಪಾಲ್), ಡಾ. ಹರ್ಷವರ್ಧನ್ (ಮಂಗಳೂರು).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.