ADVERTISEMENT

ವಿಧಾನಸಭೆಗೆ 60: ನಾಳೆಯಿಂದ ಛಾಯಾಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಬೆಂಗಳೂರು: ಅರವತ್ತು ವಸಂತಗಳನ್ನು ಕಂಡಿರುವ ರಾಜ್ಯ ವಿಧಾನಸಭೆಯ ಚರಿತ್ರೆಯನ್ನು ಚಿತ್ರಗಳ ಮೂಲಕ ತಿಳಿಸಲು ಮುಂದಾಗಿರುವ ವಾರ್ತಾ ಇಲಾಖೆ, ಇಲ್ಲಿನ ಚಿತ್ರಕಲಾ ಪರಿಷತ್ತಿನಲ್ಲಿ `ಕರ್ನಾಟಕ ವಿಧಾನಸಭೆ-60: ಅಪೂರ್ವ ಛಾಯಾಚಿತ್ರ ಪ್ರದರ್ಶನ~ ಆಯೋಜಿಸಲಿದೆ.

ಸೋಮವಾರದಿಂದ ಬುಧವಾರದವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ, ವಿಧಾನಸಭೆಯ ಇತಿಹಾಸ ಹೇಳುವ ಒಟ್ಟು 175 ಛಾಯಾಚಿತ್ರಗಳು ಪ್ರದರ್ಶನ ಕಾಣಲಿವೆ. ವಿಧಾನಸೌಧದ ನಿರ್ಮಾಣಕ್ಕೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಡಿಗಲ್ಲು ಹಾಕುತ್ತಿರುವ ಸಂದರ್ಭದಿಂದ ಆರಂಭಿಸಿ, ಇದೇ ಜೂನ್ 18ರಂದು ನಡೆದ 60ನೇ ವರ್ಷಾಚರಣೆ ಕಾರ್ಯಕ್ರಮದವರೆಗಿನ ಛಾಯಾಚಿತ್ರಗಳು ಇಲ್ಲಿ ವೀಕ್ಷಣೆಗೆ ಲಭ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬೆಳಿಗ್ಗೆ 9.30ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿರುವ ಈ ಪ್ರದರ್ಶನವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸೋಮವಾರ ಬೆಳಿಗ್ಗೆ ಉದ್ಘಾಟಿಸಲಿದ್ದಾರೆ. ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಮತ್ತು ಆರ್. ಅಶೋಕ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.

ಜೂನ್18ರಂದು ವಿಧಾನಸೌಧದಲ್ಲಿ ನಡೆದ 60ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ 125 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಇವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿಲ್ಲ. ಹಾಗಾಗಿ, ಚಿತ್ರಕಲಾ ಪರಿಷತ್ತಿನಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಈ ಛಾಯಾಚಿತ್ರಗಳನ್ನು ಮುಂಬರುವ ದಿನಗಳಲ್ಲಿ ಪ್ರದರ್ಶಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.