ADVERTISEMENT

ವಿವಿ ಮಸೂದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 19:30 IST
Last Updated 11 ಏಪ್ರಿಲ್ 2011, 19:30 IST
ವಿವಿ ಮಸೂದೆಗೆ ವಿರೋಧ
ವಿವಿ ಮಸೂದೆಗೆ ವಿರೋಧ   

ಬೆಂಗಳೂರು: ರಾಜ್ಯ ಸರ್ಕಾರದ ಉದ್ದೇಶಿತ ‘ಇನೋವೇಟಿವ್ ವಿಶ್ವವಿದ್ಯಾಲಯಗಳ ಮಸೂದೆ’ ಜಾರಿಯ ಹಿಂದೆ ವಿಶ್ವವಿದ್ಯಾಲಯಗಳನ್ನು ಕಾರ್ಪೊರೇಟ್ ಸಂಸ್ಥೆಗಳನ್ನಾಗಿಸುವ ಹುನ್ನಾರ ಅಡಗಿದೆ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ (ಎಐಡಿಎಸ್‌ಒ)ನ ರಾಜ್ಯ ಘಟಕದ ಅಧ್ಯಕ್ಷ ವಿ.ಎನ್. ರಾಜಶೇಖರ್ ಆರೋಪಿಸಿದ್ದಾರೆ.
ನಗರದಲ್ಲಿ ಇತ್ತೀಚೆಗೆ ನಡೆದ ಎಐಡಿಎಸ್‌ಒನ ಬೆಂಗಳೂರು ಜಿಲ್ಲಾ ವಿದ್ಯಾರ್ಥಿಗಳ 6ನೇ ಸಮ್ಮೇಳನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

‘ರಾಜ್ಯ ಜ್ಞಾನ ಆಯೋಗದ ಸಲಹೆ ಮೇರೆಗೆ ರಾಜ್ಯ ಸರ್ಕಾರ ಇಂತಹದೊಂದು ಶಿಕ್ಷಣ ವಿರೋಧಿ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ಇದು ರಾಜ್ಯದ ಶೈಕ್ಷಣಿಕ ರಂಗದ ಮೇಲೆ ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಮೇಲೂ ಕೆಟ್ಟ ಪರಿಣಾಮ ಬೀರಲಿದೆ’ ಎಂದು ಟೀಕಿಸಿದರು.

‘ಆರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಮಸೂದೆಯನ್ನು ಜಾರಿಗೊಳಿಸುವ ಪ್ರಸ್ತಾವ ಇದೆ. ನಂತರದ ದಿನಗಳಲ್ಲಿ ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲೂ ಇದು ಜಾರಿಯಾಗಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ವಿ.ವಿ. ಕುಲಪತಿ ಹುದ್ದೆಯ ಮೇಲೆ ಅಧ್ಯಕ್ಷರನ್ನು ನೇಮಿಸುವ ಪ್ರಸ್ತಾವ ಇದೆ. ಇದು ಜಾರಿಯಾದರೆ ಕುಲಪತಿ ಹುದ್ದೆ ಕೇವಲ ನಾಮಕಾವಸ್ಥೆ ಆಗಲಿದೆ. ಅಧ್ಯಕ್ಷರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ನ್ಯಾಯಮೂರ್ತಿಗಳು... ಹೀಗೆ ವಿವಿಧ ಕ್ಷೇತ್ರಗಳ ಐದು ಮಂದಿ ಸದಸ್ಯರಿರುತ್ತಾರೆ. ಇವರಲ್ಲಿ ಯಾರೊಬ್ಬರು ಶಿಕ್ಷಣ ತಜ್ಞರಾಗಿರುವುದಿಲ್ಲ. ಇದು ಶಿಕ್ಷಣ ವಿರೋಧಿ ನೀತಿ ಅಲ್ಲವೇ’ ಎಂದು ಪ್ರಶ್ನಿಸಿದರು.

‘ವಿ.ವಿ.ಗೆ ತಗಲುವ ವೆಚ್ಚಗಳ ಶೇ 25ರಷ್ಟು ಹಣವನ್ನು ವಿದ್ಯಾರ್ಥಿಗಳ ಶುಲ್ಕದಿಂದ ಸಂಗ್ರಹಿಸಬೇಕು ಎಂಬ ಅಂಶ ಮಸೂದೆಯಲ್ಲಿದೆ. ಹೀಗಾದರೆ ವಿದ್ಯಾರ್ಥಿಗಳು 5ರಿಂದ 6 ಪಟ್ಟು ಹೆಚ್ಚು ಪ್ರವೇಶ ಶುಲ್ಕ ತೆರಬೇಕಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಎಲ್ಲರೂ ಈ ಮಸೂದೆಯನ್ನು ವಿರೋಧಿಸಬೇಕು’ ಎಂದು ಕರೆ ನೀಡಿದರು.

ಸಂಘಟನೆಯ ಕಾರ್ಯದರ್ಶಿ ಬಿ.ಬಿ. ರವಿನಂದನ್ ಮಾತನಾಡಿ, ‘ಸಮ್ಮೇಳನದಲ್ಲಿ ಭಾಗವಹಿಸಿದ್ದ ಸುಮಾರು 40 ಕಾಲೇಜುಗಳ 230 ವಿದ್ಯಾರ್ಥಿಗಳು ಬೆಂಗಳೂರು ವಿ.ವಿ ವಿಭಜನೆ ಸೇರಿದಂತೆ ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆ, ವಿದೇಶಿ ವಿಶ್ವವಿದ್ಯಾಲಯಗಳ ಮಸೂದೆ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು’ ಎಂದರು.

ಜಿಲ್ಲಾ ಸಮಿತಿಯ ಆಯ್ಕೆ: ಇದೇ ವೇಳೆ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿ.ಹನುಮೇಶ್ (ಅಧ್ಯಕ್ಷ), ಎಸ್.ಭರತ್ ಕುಮಾರ್ ಹಾಗೂ ಕೆ.ಎಸ್. ಅಶ್ವಿನಿ (ಉಪಾಧ್ಯಕ್ಷ), ಬಿ.ಬಿ. ರವಿನಂದನ್ (ಕಾರ್ಯದರ್ಶಿ) ಹಾಗೂ ಧನುಷ್ ಕಿರಣ್, ಸಿ.ಆನಂದ್, ಅಜಯ್ ಕಾಮತ್ (ಸೆಕ್ರೆಟೇರಿಯೆಟ್ ಸದಸ್ಯರು) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.