ADVERTISEMENT

ವಿಶೇಷ ಜಿಲ್ಲಾಧಿಕಾರಿಗಳಿಂದ ಮಧ್ಯಂತರ ವರದಿ

ಶಿವರಾಂ
Published 20 ಜೂನ್ 2011, 18:45 IST
Last Updated 20 ಜೂನ್ 2011, 18:45 IST
ವಿಶೇಷ ಜಿಲ್ಲಾಧಿಕಾರಿಗಳಿಂದ ಮಧ್ಯಂತರ ವರದಿ
ವಿಶೇಷ ಜಿಲ್ಲಾಧಿಕಾರಿಗಳಿಂದ ಮಧ್ಯಂತರ ವರದಿ   

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ ಗೌಡಹಳ್ಳಿ ಗ್ರಾಮದ ಗೋಮಾಳ ಜಾಗದ ಹೆಸರಿನಲ್ಲಿ ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ಹಾಗೂ ಇತರರು ಅಕ್ರಮ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ `ಇ.ಕೆ. ಎನ್‌ಕ್ಲೇವ್~ ಬಡಾವಣೆ ನಿರ್ಮಿಸಿದ್ದು, ಅಕ್ರಮ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಬೆಂಗಳೂರು ನಗರ ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

ಗೌಡಹಳ್ಳಿ ಸರ್ವೆ ನಂ. 57, 58 ಮತ್ತು 59ರ ಸರ್ಕಾರಿ ಜಮೀನು ಹಾಗೂ ಶಿವನಪುರ ಗ್ರಾಮದ ಸರ್ವೆ ನಂ. 65 ಮತ್ತು ಇತರ ಜಮೀನುಗಳ ಹೆಸರಿನಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಅನಧಿಕೃತವಾಗಿ ಈ ಬಡಾವಣೆ ನಿರ್ಮಿಸಿರುವ ಕುರಿತು ವಿಶೇಷ ಜಿಲ್ಲಾಧಿಕಾರಿಗಳು ನೀಡಿದ ವರದಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನುರೀತ್ಯ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕಾನೂನುಬಾಹಿರವಾಗಿ `ಇ.ಕೆ. ಎನ್‌ಕ್ಲೇವ್~ ಬಡಾವಣೆ ನಿರ್ಮಿಸಿರುವ ಕುರಿತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಜಿ.ಎಸ್. ನಾಯಕ್ ಏಪ್ರಿಲ್ 27ಕ್ಕೆ ಈ ಕುರಿತು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

ಗೌಡಹಳ್ಳಿ ಸರ್ವೆ ನಂ. 59ರಲ್ಲಿನ ಒಟ್ಟು 27.01 ಎಕರೆ ಸರ್ಕಾರಿ ಗೋಮಾಳ ಜಮೀನಿನಲ್ಲಿ `ಇ.ಕೆ. ಎನ್‌ಕ್ಲೇವ್~ ಬಡಾವಣೆ ನಿರ್ಮಾಣ ಮಾಡುವಾಗ ಈ ಕೆಳಕಂಡ ಅಕ್ರಮಗಳು ಹಾಗೂ ಕಾನೂನುಬಾಹಿರ ಪ್ರಕ್ರಿಯೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂಬುದನ್ನು ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟು ವಿಸ್ತೀರ್ಣ 27.01 ಎಕರೆ ಪೈಕಿ 24.01 ಎಕರೆ ಭೂ ಮಂಜೂರಾತಿಯಾಗಿದೆ ಎಂದು ಹೇಳುವ ಪ್ರಕರಣಗಳ ಮೂಲ ಕಡತಗಳು ಲಭ್ಯ ಇರುವುದಿಲ್ಲ. ಐಎಲ್, ಆರ್‌ಆರ್, ಆರ್‌ಟಿಸಿ ಹಾಗೂ ಪಕ್ಕಾ ಪೋಡುಗಳ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.

ಕೋಷ್ಟಕ `ಅ~ ಮತ್ತು `ಬ~ರಲ್ಲಿ ತೋರಿಸಿರುವ 18 ಎಕರೆ ಭೂ ಪರಿವರ್ತನೆಯಾಗಿದೆ. 9.01 ಎಕರೆ ಭೂ ಪರಿವರ್ತನೆಯಾಗಿರುವುದಿಲ್ಲ ಮತ್ತು ಇದರಲ್ಲಿ ಮಂಜೂರಾಗದ ಮೂಲ ಸರ್ವೆ ನಂ. 59ರಲ್ಲಿ ಉಳಿದಿರುವ ಮೂರು ಎಕರೆಯಲ್ಲಿ ಸರ್ಕಾರಿ ಗೋಮಾಳ ಕೂಡ ಸೇರಿರುತ್ತದೆ.

 ಗೌಡಹಳ್ಳಿ ಗ್ರಾಮದ ಸ.ನಂ. 59ರಲ್ಲಿ ಒಟ್ಟು 12 ಎಕರೆಗೆ ಮಾತ್ರ ವಿನ್ಯಾಸ ನಕ್ಷೆ ಅನುಮೋದನೆ ನೀಡಲಾಗಿದೆ ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಜಂಟಿ ನಿರ್ದೇಶಕರು (ನಗರ ಮತ್ತು ಗ್ರಾಮೀಣ) ವರದಿ ಸಲ್ಲಿಸಿದ್ದಾರೆ. ಅಂದರೆ, ಬಡಾವಣೆ ನಿರ್ಮಾಣಕ್ಕೆ ಬಳಸಲು ಭೂ ಪರಿವರ್ತನೆಗೆ ಮಂಜೂರಾತಿ ಪಡೆದುಕೊಂಡಿರುವ 18 ಎಕರೆ ವಿಸ್ತೀರ್ಣದಲ್ಲಿ 6 ಎಕರೆಗೆ ಸಂಬಂಧಪಟ್ಟಂತೆ ಹಾಗೂ ಇನ್ನುಳಿದ 9.01 ಎಕರೆ ಪ್ರದೇಶದ ವಸತಿ ವಿನ್ಯಾಸ ನಕ್ಷೆಗೆ ನೆಲಮಂಗಲ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳದೆ ಬಡಾವಣೆ ನಿರ್ಮಿಸಿರುವುದು ದೃಢಪಟ್ಟಿದೆ.

ಅಲ್ಲದೆ, ಇನ್ನುಳಿದ ಗೌಡಹಳ್ಳಿ ಗ್ರಾಮದ ಸ.ನಂ. 57, 58 ಹಾಗೂ ಶಿವನಪುರ ಗ್ರಾಮದ ಸ.ನಂ. 65 ಮತ್ತು ಇತರೆ ಸರ್ವೆ ನಂಬರುಗಳಲ್ಲಿ 45-26 ಎಕರೆ/ಗುಂಟೆ ವಿಸ್ತೀರ್ಣಕ್ಕೆ ಪ್ರಾಧಿಕಾರ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಿಲ್ಲ ಎಂಬ ಅಂಶವನ್ನೂ ವರದಿಯಲ್ಲಿ ನಮೂದಿಸಲಾಗಿದೆ.

ಶಿವನಪುರ ಗ್ರಾಮದ ಸ.ನಂ. 141/1 ಮತ್ತು ಸ.ನಂ. 143ರಲ್ಲಿನ ಒಟ್ಟು 13-32 ಎಕರೆ/ ಗುಂಟೆ ಭೂ ಪರಿವರ್ತನೆಯಾಗಿದೆ ಎಂದು ಬಡಾವಣೆ ನಕ್ಷೆಯಲ್ಲಿ ನಮೂದಿಸಿ ನೆಲಮಂಗಲ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯರ್ಶಿಗಳಿಂದ ಅನುಮೋದನೆ ಪಡೆದುಕೊಂಡಿರುವುದು ಕೂಡ ಸಂಪೂರ್ಣ ಅಕ್ರಮ ಮತ್ತು ಕಾನೂನುಬಾಹಿರ ನಡವಳಿಕೆಯಾಗಿದೆ.

ಆರ್‌ಎಂಪಿ 2015ರ ಜೋನಲ್ ರೆಗ್ಯುಲೇಷನ್ ಪ್ರಕಾರ, ಶಿವನಪುರ ಗ್ರಾಮವನ್ನು ಸರ್ಕಾರ ಸಂಪೂರ್ಣವಾಗಿ ಹಸಿರು ವಲಯ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಹೀಗಿದ್ದಾಗ್ಯೂ, ಗ್ರಾಮದ ಸ.ನಂ. 137, 139/1, 2, 3, 141/1, 2, 3, 142/1, 2, 3 ಹಾಗೂ 143ರ ವಿವಿಧ ಪೋಡುಗಳಲ್ಲಿ ಒಟ್ಟು 34-15 ಎಕರೆ/ಗುಂಟೆಯನ್ನು ಅಂದರೆ, ವಿಧಿವತ್ತಾಗಿ ಕೋಷ್ಟಕದಲ್ಲಿ ತೋರಿಸಿರುವ 13-32 ಎಕರೆ/ ಗುಂಟೆಗೆ ಭೂ ಪರಿವರ್ತನಾ ಆದೇಶ ಸೃಷ್ಟಿಸಿ ಈ ಜಾಗವನ್ನು ಬಡಾವಣೆಯ ನಕ್ಷೆಯಲ್ಲಿ ಸೇರಿಸಲಾಗಿದೆ. ಆದರೆ, ಈ ಜಾಗ ಹಾಲಿ ಹಸಿರು ವಲಯ ಪಟ್ಟಿಯಲ್ಲಿ ಸೇರಿದೆ. ಅಲ್ಲದೆ, ಭೂ ಪರಿವರ್ತನೆ ಮಾಡದೆ ಭೂ ಪರಿವರ್ತನಾ ಆದೇಶವನ್ನು ನಮೂದಿಸಿ ಬಡಾವಣೆ ನಕ್ಷೆಯಲ್ಲಿ ಸೇರಿಸಿರುವುದು ಮತ್ತು ಅದರಲ್ಲಿ ನಿವೇಶನ ವಿಂಗಡಿಸಿರುವುದು ಕೂಡ ಕಾನೂನುಬಾಹಿರ ಪ್ರಕ್ರಿಯೆಯಾಗಿದೆ.

ಶಿವನಪುರ ಗ್ರಾಮದ ಸ.ನಂ. 137, 139/1, 2, 3, 141/1, 2, 3, 142/1, 2, 3, 4ರಲ್ಲಿನ ವಿವಿಧ ಪೋಡುಗಳಲ್ಲಿ ಒಟ್ಟು ವಿಸ್ತೀರ್ಣ 20-23 ಎಕರೆ/ ಗುಂಟೆಗೆ ಮಾತ್ರ ಪ್ರಾಧಿಕಾರದಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತಯಾಗಿದೆ. ಆದರೆ, ಆ ಸಂದರ್ಭದಲ್ಲಿ ಈ ಸರ್ವೆ ನಂಬರುಗಳು ಹಸಿರು ವಲಯ ಎಂದು ಘೋಷಿತವಾಗಿರುವುದಿಲ್ಲ. ಉಳಿಕೆ, 13-32 ಎಕರೆ/ಗುಂಟೆ (ಲೇಔಟ್‌ನಲ್ಲಿ ತೋರಿಸಿರುವ ನಂಬರು) ಭೂ ಪರಿವರ್ತನೆಯಾಗಿರುವುದಿಲ್ಲ. ಈ ಸರ್ವೆ ನಂಬರುಗಳು ಈಗ ಹಸಿರು ವಲಯದಲ್ಲಿರುತ್ತವೆ.

ಕ್ರಮಕ್ಕೆ ಶಿಫಾರಸು: ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಕಾಯ್ದೆ 2007 ದಿನಾಂಕ 11-12-2006ರಿಂದ ಜಾರಿಗೆ ಬಂದಿರುವ ಕಲಂ 192 ಎ (1), (2) (3) (5) ಮತ್ತು (6)ರ ಉಲ್ಲಂಘನೆಗಾಗಿ ಅಂದರೆ, ಸರ್ಕಾರಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಅದನ್ನು ಸ್ವಾಧೀನಪಡಿಸಿಕೊಂಡಿರುವುದು. ಅನೈತಿಕ ಮತ್ತು ಮೋಸದ ಮಾರ್ಗದಿಂದ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ಕಬಳಿಸಿರುವುದು, ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಕೃಷಿಯೇತರ ಉದ್ದೇಶಕ್ಕೆ ಬಳಸಿರುವುದು, ಸುಳ್ಳು ಭೂ ಪರಿವರ್ತನೆ ದಾಖಲೆಗಳನ್ನು ಸೃಷ್ಟಿಸಿ ಬಡಾವಣೆ ನಿರ್ಮಿಸಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡುವಂತೆ ಶಿಫಾರಸು ಮಾಡಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 96 (4)ರಡಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೆ ಬಳಸಿರುವ ಹಿನ್ನೆಲೆಯಲ್ಲಿ 9-01 ಎಕರೆ/ ಗುಂಟೆ ವಿಸ್ತೀರ್ಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 107 `ಎ~ ಅನ್ವಯ ಚದರ ಅಡಿಯೊಂದಕ್ಕೆ 11.50 ರೂಪಾಯಿ ದಂಡ ವಿಧಿಸಬೇಕು.

ಗೌಡಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಸ.ನಂ. 59ರ 3 ಎಕರೆಗೆ ಸಂಬಂಧಿಸಿದಂತೆ ಹಾಗೂ ಶಿವನಪುರ ಗ್ರಾಮದ ಸ.ನಂ. 141/1 ಮತ್ತು ಸ.ನಂ. 143ರ ವಿವಿಧ ಪೋಡುಗಳಲ್ಲಿ ಹಸಿರು ವಲಯ ಪಟ್ಟಿಯನ್ನು ಉಲ್ಲಂಘಿಸಿ 13.32 ಎಕರೆ ಪೈಕಿ ಸೃಷ್ಟಿತ ಹಾಗೂ ಸುಳ್ಳು ಭೂ ಪರಿವರ್ತನೆ ಆದೇಶ ನಮೂದಿಸಿ ಬಡಾವಣೆ ನಿರ್ಮಿಸಿರುವ ಸರ್ಕಾರದ ಒಟ್ಟು 16.32 ಎಕರೆ ಜಾಗವನ್ನು ಕಲಂ 96 (1) ಮತ್ತು ಕಲಂ 96 (4)ರಡಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ತಪ್ಪು ಮಾಡಿದ್ದರೆ ಜೈಲಿಗೆ ಕಳಿಸಲಿ: ಇ. ಕೃಷ್ಣಪ್ಪ
ಬೆಂಗಳೂರು: 
`ನಕಲಿ ದಾಖಲೆ ಸೃಷ್ಟಿಸಿ ಅಥವಾ ಕಾನೂನು ಉಲ್ಲಂಘಿಸಿ `ಇ.ಕೆ. ಎನ್‌ಕ್ಲೇವ್~ ಬಡಾವಣೆ ನಿರ್ಮಿಸಿದ್ದಲ್ಲಿ ಸರ್ಕಾರ ಕೂಡಲೇ ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ಕಳಿಸಲಿ~ ಎಂದು ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ.

`ರೈತರಿಂದ ಭೂ ಪರಿವರ್ತನೆಯಾದ ನಂತರವೇ ನಾವು (ಇತರ ನಾಲ್ವರು ಸೇರಿ) ಜಮೀನು ಖರೀದಿಸಿದ್ದೇವೆ. 2004ರಲ್ಲಿಯೇ ಈ ಪ್ರಕ್ರಿಯೆಯೆಲ್ಲಾ ಮುಗಿದಿದೆ. ಬಿಎಂಆರ್‌ಡಿಎ ಕೂಡ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಒಂದು ವೇಳೆ ನಕಲಿ ದಾಖಲೆ ಸೃಷ್ಟಿಸಿದ್ದರೆ ಸರ್ಕಾರ ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಬಹುದಿತ್ತು~ ಎಂದು ಪ್ರಶ್ನಿಸಿದರು.
 
`ಜನತಾದಳ (ಎಸ್) ಶಾಸಕರನ್ನು ನಿರ್ನಾಮ ಮಾಡುವ ಉದ್ದೇಶದಿಂದಲೇ ಸರ್ಕಾರ ತನ್ನ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಎಂಆರ್‌ಡಿಎ ಅನುಮೋದನೆ ನೀಡಿದ ಮೇಲೆ ಇದರಲ್ಲಿ ಸರ್ಕಾರದ ಲೋಪವೂ ಇದೆ ಎಂದರ್ಥ. ಆದರೆ, ಈ ಸಂಬಂಧ ಇದುವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಗೋಮಾಳ ಜಾಗ ಅತಿಕ್ರಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ~ ಎಂದು ಹೇಳಿದರು.

`ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾಖಲೆ ಸೃಷ್ಟಿಸಿರುವುದು ರುಜುವಾಗಿದ್ದ ಪಕ್ಷದಲ್ಲಿ ನೇರವಾಗಿ ಸರ್ಕಾರ ನನ್ನನ್ನು ವಿಚಾರಣೆಗೊಳಪಡಿಸಬಹುದಿತ್ತು. ನಾನೇನೂ ಕಾನೂನು ಉಲ್ಲಂಘಿಸಿಲ್ಲ. ಅಕ್ರಮವಾಗಿ ಬಡಾವಣೆ ನಿರ್ಮಿಸಿರುವುದು ಸಾಬೀತಾದಲ್ಲಿ ನಾಳೆಯೇ ಸರ್ಕಾರ ಜಾಗ ವಶಪಡಿ ಸಿಕೊಳ್ಳಲಿ. ಅದಕ್ಕೆ ಯಾರ ಅಡ್ಡಿಯೂ ಇಲ್ಲ~ ಎಂದರು.

`ಯಲಹಂಕ ಕ್ಷೇತ್ರದಲ್ಲಿ ಮುಂದೆ ನಾನು ಚುನಾವಣೆಗೆ ಸ್ಪರ್ಧಿಸಿದರೆ ಅಡ್ಡಿಯಾಗಬಹುದು ಎನ್ನುವ ದುರುದ್ದೇಶದಿಂದ ಶಾಸಕ ಎಸ್.ಆರ್. ವಿಶ್ವನಾಥ್ ದೂರು ನೀಡಿದ್ದಾರೆ. ಇದೆಲ್ಲಾ ರಾಜಕೀಯ ಪ್ರೇರಿತ. ಸರಿ-ತಪ್ಪು, ಅಂತೆ-ಕಂತೆ ಬಗ್ಗೆ ಸಾರ್ವಜನಿಕ ವಲಯದಲ್ಲಿಯೂ ಚರ್ಚೆಯಾಗಲಿ ಬಿಡಿ~ ಎಂದು ಕೃಷ್ಣಪ್ಪ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.