ADVERTISEMENT

ವಿಶೇಷ ಯೋಜನೆ ಜಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 18:55 IST
Last Updated 20 ಫೆಬ್ರುವರಿ 2011, 18:55 IST

ಬೆಂಗಳೂರು: ಮುಂಬರುವ ಬಜೆಟ್‌ನಲ್ಲಿ ಸರ್ಕಾರ ಧಾರ್ಮಿಕ ಅಲ್ಪ ಸಂಖ್ಯಾತ ಸಮುದಾಯಗಳಿಗೆ ವಿಶೇಷ ಯೋಜನೆಗಳನ್ನು ಜಾರಿ ಮಾಡಬೇಕೆಂದು ಕರ್ನಾಟಕ ಮುಸ್ಲಿಮರ ವೇದಿಕೆಯ ಅಧ್ಯಕ್ಷ ಎ. ಖಾಸಿಂ ಸಾಬ್ ಮನವಿ ಮಾಡಿದರು.

ಮಹಾ ಕರ್ನಾಟಕ ಸೇನೆ, ದಲಿತ ಕ್ರೈಸ್ತ ಒಕ್ಕೂಟ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗವು ಈಚೆಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರ ಕಳೆದ ಬಜೆಟ್‌ನಲ್ಲಿ ಯಾವುದೇ ವಿಶೇಷ ಯೋಜನೆ ಜಾರಿಗೆ ತರದೆ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ದ್ರೋಹ ಬಗೆದಿದೆ. ಈ ಬಾರಿಯಾದರೂ ಬಜೆಟ್‌ನಲ್ಲಿ 1000 ಕೋಟಿ ಹಣವನ್ನು ಧಾರ್ಮಿಕ ಅಲ್ಪಸಂಖ್ಯಾತ ಕಾರ್ಯಗಳಿಗೆ ಮೀಸಲಿಡಬೇಕು ಎಂದರು.

ನಂತರ ಮಾತನಾಡಿದ ಅಂಜುಮಾನ್-ಎ-ಫನ್‌ಖರಾನೆ ಉರ್ದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಾಹರಿಯರ್ ಖಾನ್ ಅವರು, ಜನಸಂಖ್ಯೆ ಆಧಾರದ ಮೇಲೆ ಸರ್ಕಾರ ಬಜೆಟ್ ಮಂಡನೆ ಮಾಡಬೇಕು. ಇದರಿಂದ ಯಾವುದೇ ಜನಾಂಗಕ್ಕೂ ತಾರತಮ್ಯ ಉಂಟಾಗುವುದಿಲ್ಲ ಎಂದರು.

ಇತ್ತೀಚೆಗೆ ಚರ್ಚ್ ದಾಳಿ ಸಂಬಂಧ ಸೋಮಶೇಖರ್ ಆಯೋಗ ಮಂಡಿಸಿದ ವರದಿ ಸತ್ಯತೆಯಿಂದ ಕೂಡಿಲ್ಲ ಇದರಿಂದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಆತಂಕ ಉಂಟಾಗಿದೆಯೆಂದು ಅಭಿಪ್ರಾಯಪಟ್ಟರು. ದಲಿತ ಕ್ರೈಸ್ತರ ಒಕ್ಕೂಟ ಸಂಚಾಲಕ ಡಾ. ಮನೋಹರ್‌ಚಂದ್ರ ಪ್ರಸಾದ್ ಮಾತನಾಡಿ ಅಲ್ಪಸಂಖ್ಯಾತರ ಹಕ್ಕುಗಳು ಸಂವಿಧಾನಾತ್ಮಕವಾಗಿದ್ದು ಅವುಗಳ ಸಂರಕ್ಷಣೆಗೆ ಸೂಕ್ತ ಕಾನೂನು ರಚಿಸಬೇಕು. ತಾಲ್ಲೂಕು ಮಟ್ಟದಲ್ಲಿ ಸೌಹಾರ್ದ ಸಮಿತಿ ರಚನೆ ಮಾಡಬೇಕೆಂದು ಕೋರಿದರು. ವಕ್ಫ್  ಮಂಡಳಿಯು ಹೊಂದಿರುವ ಸಾವಿರಾರು ಎಕರೆ ಭೂಮಿ ಸದುಪಯೋಗವಾಗುತ್ತಿಲ್ಲ, ಸರ್ಕಾರ ಕೂಡಲೇ ಇಂತಹ ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಅಗತ್ಯರಿಗೆ ನೀಡಬೇಕೆಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಶಿ ಅಗ್ರಹಿಸಿದರು.  ಮಹಾ ಕರ್ನಾಟಕ ಸೇನೆ ಅಧ್ಯಕ್ಷ ಅಫ್ರೋಜ್ ಎಸ್ ಪಾಳ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.