ADVERTISEMENT

ವಿಸ್ತರಣೆ 2 ತಿಂಗಳಲ್ಲಿ ಪೂರ್ಣ

ಮೈಸೂರು ರಸ್ತೆ: ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 20:00 IST
Last Updated 20 ಸೆಪ್ಟೆಂಬರ್ 2013, 20:00 IST

ಬೆಂಗಳೂರು: ಶಿರ್ಸಿ ವೃತ್ತದ ಮೇಲ್ಸೇತುವೆಯಿಂದ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಮೈಸೂರು ರಸ್ತೆಯ ವಿಸ್ತರಣೆ ಕಾರ್ಯವನ್ನು ನವೆಂಬರ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡ ಲಾಗುವುದು ಎಂದು ಮೇಯರ್‌ ಬಿ.ಎಸ್. ಸತ್ಯನಾರಾಯಣ ತಿಳಿಸಿದರು.

ಶುಕ್ರವಾರ ಅವರು ಮೈಸೂರು ರಸ್ತೆಯ ತಪಾಸಣೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ಮೈಸೂರು ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇನ್ನು ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಳಂಬವಾಗಿದ್ದಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಾವು ತಪಾಸಣೆಗೆ ಬಂದಾಗ ಮಾತ್ರ ಸಮಸ್ಯೆಗಳನ್ನು ಹೇಳಲಾಗುತ್ತದೆ. ಮೊದಲೇ ಆಯುಕ್ತರ ಗಮನಕ್ಕೆ ತಂದು ಪರಿಹರಿಸಿಕೊಳ್ಳಲು ಏನು ಸಮಸ್ಯೆ ಎಂದು ಕೇಳಿದ ಅವರು, ಅಧಿಕಾರಿಗಳಾಗಲೀ ಗುತ್ತಿಗೆದಾರ ರಾಗಲೀ ಸಬೂಬುಗಳನ್ನು ಹೇಳ ಕೂಡದು, ಕೂಡಲೇ ಕಾಮಗಾರಿ ಮುಗಿಸಬೇಕು ಎಂದು ತಾಕೀತು ಮಾಡಿದರು.

ಜಲ ಮಂಡಳಿ ಮತ್ತು ಭಾರತ ಸಂಚಾರ ನಿಗಮದಿಂದ ಆಗಬೇಕಾಗಿರುವ ಕಾಮಗಾರಿಗಳನ್ನು ಬೇಗನೆ ಮುಗಿಸಿಕೊಟ್ಟಲ್ಲಿ ನವೆಂಬರ್ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಗುತ್ತಿಗೆದಾರರು ತಿಳಿಸಿದರು. ಅಕ್ಟೋ ಬರ್ ತಿಂಗಳ ಒಳಗಾಗಿ ಜಲ ಮಂಡಳಿ ಮತ್ತು ಬಿಎಸ್‌ಎನ್‌ಎಲ್‌ನ ಮಾರ್ಗ ಸ್ಥಳಾಂತರದ ಕೆಲಸ ಪೂರ್ಣಗೊಳಿಸ ಬೇಕು ಎಂದು ಸೂಚಿಸಿದರು.

ಇನ್ನು ಎರಡು ತಿಂಗಳಲ್ಲಿ ಕೆಲಸ ಮುಗಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಹಣವನ್ನು ತಡೆಹಿಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆಯಲ್ಲಿ ಸ್ಮಶಾನಕ್ಕೆ ಸೇರಿದ ಜಾಗವನ್ನು ರಸ್ತೆ ವಿಸ್ತರಣೆಗಾಗಿ ಪಡೆಯಲಾಗಿದ್ದು, ಇನ್ನು ಸ್ವಲ್ಪ ಭಾಗವನ್ನು ಒಡೆದು ಹಾಕಬೇಕಾಗಿದೆ. ಅದರ ಬದಲಿಗೆ ಒಂದು ನೀರಿನ ಟ್ಯಾಂಕ್ ಕಟ್ಟಿ ಕೊಡಬೇಕಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದರು.

ಆಯುಕ್ತರಿಂದ ಅನು ಮೋದನೆ ಪಡೆದು, ನೀರಿನ ಟ್ಯಾಂಕ್ ಕಟ್ಟಿ, ಉಳಿದ ಜಾಗವನ್ನು ರಸ್ತೆ ವಿಸ್ತರಣೆಕ್ಕೆ ಸೇರಿಸಿಕೊಳ್ಳಬೇಕು ಎಂದು ಮೇಯರ್‌ ಸೂಚಿಸಿದರು.  ಮೈಸೂರು ರಸ್ತೆಯ ಅಶ್ವತ್ಥಕಟ್ಟೆ ಅಡ್ಡರಸ್ತೆಯಲ್ಲಿರುವ ಕ್ರಿಶ್ಚಿಯನ್ ಸ್ಮಶಾನಕ್ಕೆ ಹೊಂದಿಕೊಂಡಂತೆ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಅಡ್ಡರಸ್ತೆಗಳಲ್ಲಿ ಕಸದ ರಾಶಿ ಬಿದ್ದಿರುವುದನ್ನು ಗಮನಿಸಿದ ಮೇಯರ್‌ ತಕ್ಷಣ ಸ್ವಚ್ಛಗೊಳಿಸಬೇಕು ಎಂದು ಆದೇಶ ನೀಡಿದರು.

ಪಾಲಿಕೆ ಆಯುಕ್ತ ಎಂ. ಲಕ್ಷ್ಮೀನಾರಾಯಣ ಉಪ ಮೇಯರ್ ಇಂದಿರಾ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಸೋಮಶೇಖರ್, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಆರ್. ಚಂದ್ರಶೇಖರಯ್ಯ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಖಾ ಹಾಗೂ ಪಾಲಿಕೆ ಸದಸ್ಯರಾದ ಬಿ.ವಿ. ಗಣೇಶ್, ವಿ. ಕೃಷ್ಣ ಮತ್ತು ಬಿ.ಎಸ್. ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.