ADVERTISEMENT

ವೃತ್ತಿ ಶಿಕ್ಷಣ ಶುಲ್ಕ ಏರಿಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್‌ಗಳ ಶುಲ್ಕವನ್ನು ಏರಿಕೆ ಮಾಡುವ ಮೂಲಕ ಸರ್ಕಾರ ಖಾಸಗಿ ಆಡಳಿತ ಮಂಡಳಿಗಳ ಪರವಾಗಿ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ)ದ ಕಾರ್ಯಕರ್ತರು ನಗರದ ಮಲ್ಲೇಶ್ವರದಲ್ಲಿರುವ ಸಿಇಟಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐನ ರಾಜ್ಯ ಘಟಕದ ಅಧ್ಯಕ್ಷ ಎನ್.ಅನಂತ ನಾಯ್ಕ ಮಾತನಾಡಿ `ಪ್ರಸಕ್ತ ವರ್ಷದ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇನ್ನಿತರೆ ವೃತ್ತಿ ಶಿಕ್ಷಣ ಕೊರ್ಸ್‌ಗಳ ಶುಲ್ಕವನ್ನು ಶೇ.10 ರಷ್ಟು ಹೆಚ್ಚಿಸಿರುವ ಸರ್ಕಾರದ ನಿರ್ಧಾರ ಖಾಸಗಿ ಕಾಲೇಜುಗಳ ಪರವಾಗಿದ್ದು ಈ ಕ್ರಮವನ್ನು ಕೂಡಲೇ ಕೈಬಿಡಬೇಕು~ ಎಂದು ಆಗ್ರಹಿಸಿದರು.

ಪ್ರಸ್ತುತ ವರ್ಷದಲ್ಲಿ 1.22 ಲಕ್ಷ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಹಾಜರಾಗಲಿದ್ದು ಇದರಲ್ಲಿ ಬಹುತೇಕರು ಬಡ ವಿದ್ಯಾರ್ಥಿಗಳೇ ಆಗಿದ್ದಾರೆ. ಈಗ ನಿಗದಿಯಾಗಿರುವ ಶುಲ್ಕವೇ ಹೆಚ್ಚಾಗಿದ್ದು, ಹಲವು ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಿರುವುದುರಿಂದ ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದ ಆಸೆಯನ್ನು ಶಾಶ್ವತವಾಗಿ ತ್ಯಜಿಸುವಂತಾಗುತ್ತದೆ ಎಂದರು.

ಕಳೆದ ಎಂಟು ವರ್ಷಗಳಿಂದ ವೃತ್ತಿ ಶಿಕ್ಷಣದ ಸರ್ಕಾರಿ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟುಕೊಡುತ್ತಾ ಬಂದಿರುವ ಸರ್ಕಾರ ನಿರಂತರವಾಗಿ ಶುಲ್ಕ ಏರಿಕೆ ಮಾಡುತ್ತಾ ವೃತ್ತಿ ಶಿಕ್ಷಣದ ವ್ಯಾಪಾರಿಕರಣಕ್ಕೆ ಮುಂದಾಗಿದೆ ಎಂದು ಪ್ರತಿಭಟನಾಕರರು ಆರೋಪಿಸಿದರು.

ಹೊಸದಾಗಿ ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿ, 75: 25ರ ಅನುಪಾತದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೀಟು ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ರಾಜ್ಯ ಕಾರ‌್ಯದರ್ಶಿ ಹುಳ್ಳಿ ಉಮೇಶ್, ಎಂ.ಮುನಿರಾಜು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.