ADVERTISEMENT

ವೈದಿಕರಿಂದ ಶೂದ್ರ ಮೂಲದ ದೇವಸ್ಥಾನಗಳ ಅಪಹರಣ

‘ಅರಿವಿನ ಆಂದೋಲನ’ ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ಧರಾಮಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:49 IST
Last Updated 6 ಡಿಸೆಂಬರ್ 2013, 19:49 IST
ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ‘ಮೂಢನಂಬಿಕೆಗಳ ಬಗ್ಗೆ ಪ್ರಶ್ನಿಸಿ’ ಆಂದೋಲನಕ್ಕೆ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಚಾಲನೆ ನೀಡಿದರು. ಮೌಢ್ಯಾಚರಣೆ ತಡೆ ಒಕ್ಕೂಟ ಸಂಚಾಲಕ ಪ್ರೊ.ಎ.ಎಸ್.ನಟರಾಜ್, ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಸದಸ್ಯೆ ಇಂದಿರಾ ಕೃಷ್ಣಪ್ಪ, ರಾಷ್ಟ್ರೀಯ ಕಾನೂನು  ಶಾಲೆಯ ಸಹಪ್ರಾಧ್ಯಾಪಕ ಡಾ.ಎಸ್.ಜಾಫೆಟ್ ಇತರರು ಇದ್ದಾರೆ	–---–-ಪ್ರಜಾವಾಣಿ ಚಿತ್ರ
ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮೂಢನಂಬಿಕೆಗಳ ಬಗ್ಗೆ ಪ್ರಶ್ನಿಸಿ’ ಆಂದೋಲನಕ್ಕೆ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಚಾಲನೆ ನೀಡಿದರು. ಮೌಢ್ಯಾಚರಣೆ ತಡೆ ಒಕ್ಕೂಟ ಸಂಚಾಲಕ ಪ್ರೊ.ಎ.ಎಸ್.ನಟರಾಜ್, ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಸದಸ್ಯೆ ಇಂದಿರಾ ಕೃಷ್ಣಪ್ಪ, ರಾಷ್ಟ್ರೀಯ ಕಾನೂನು ಶಾಲೆಯ ಸಹಪ್ರಾಧ್ಯಾಪಕ ಡಾ.ಎಸ್.ಜಾಫೆಟ್ ಇತರರು ಇದ್ದಾರೆ –---–-ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶೂದ್ರಮೂಲದ ದೇವಸ್ಥಾನಗಳೆಲ್ಲವೂ ವೈದಿಕರಿಂದ ಅಪಹರಣಗೊಂಡಿವೆ’  ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ಅರಿವಿನ ಆಂದೋಲನ’  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಡೆ ಮಡೆಸ್ನಾನಕ್ಕೆ ಒಳಗಾಗು­ವವರು ಮಲೆ ಕುಡಿಯರು. ಕುಕ್ಕೆ ಸುಬ್ರಹ್ಮಣ್ಯ ಅವರ ಮೂಲ ದೈವ. ಅಪಾರ ನಿಧಿ ಹಾಗೂ ಸಂಪತ್ತನ್ನು ಒಳಗೊಂಡಿದ್ದ ಸುಬ್ರಹ್ಮಣ್ಯ ದೇವಾ­ಲಯದ ಮೇಲೆ ಪುರೋಹಿತಶಾಹಿಗಳ ಕಣ್ಣುಬಿತ್ತು. ಇದನ್ನು ಪ್ರಶ್ನಿಸಿದ ಮಲೆ­ಕುಡಿಯರಿಗೆ ಛಡಿಯೇಟು ಹಾಗೂ ಎಂಜಲೆಲೆ ಮೇಲೆ ಉರುಳಾ­ಡುವ ಶಿಕ್ಷೆ ವಿಧಿಸಲಾಯಿತು. ಕಾಲಕ್ರಮೇಣ ಇದೇ ಆಚರಣೆಯಾಗಿ ಬೆಳೆದುಬಂದಿದೆ’ ಎಂದು ಮಾಹಿತಿ ನೀಡಿದರು.

'ತಿರುಪತಿ ತಿಮ್ಮಪ್ಪ, ಪುರಿ ಜಗನ್ನಾಥ  ಸೇರಿದಂತೆ ಬಹುತೇಕ ಶೂದ್ರ ಮೂಲದ ದೇವಸ್ಥಾನಗಳು ವೈದಿಕರ ಹಿಡಿತದಲ್ಲಿವೆ. ಇದನ್ನು ಪ್ರಶ್ನಿಸುವವರಿಗೆ ಒಂದೇ ಶಿಕ್ಷೆ, ಇಲ್ಲವೇ ಶಾಪ ದೊರೆಯುತ್ತದೆ’ ಎಂದು ವ್ಯಂಗ್ಯವಾಡಿದರು. ‘ದಲಿತರಿಗೆ ವಿಧಿಸಿದ್ದ ಮಡೆ ಮಡೆಸ್ನಾನ, ಮಾರಿಹಬ್ಬದಂತಹ  ಅಸಂಖ್ಯಾತ ಶಿಕ್ಷೆಗಳು ಕಾಲಕ್ರಮೇಣ ಆಚರಣೆಗಳಾಗಿ ಬೆಳೆದುಬಂದಿವೆ. ಆಚರಣೆಗಳಲ್ಲಿ ಮಾನವೀಯತೆ ಇರುವುದಕ್ಕಿಂತ ಮೌಢ್ಯವೇ ಹೆಚ್ಚಾಗಿದೆ. ಇವುಗಳಿಗೆ ಕಡಿವಾಣ ಹಾಕುವ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲು ಮೂಲಭೂತವಾದಿಗಳು ಬಿಡುತ್ತಿಲ್ಲ’ ಎಂದು ಹೇಳಿದರು.

‘ಶೋಷಿತ ಸಮುದಾಯವನ್ನು ಮೂಢನಂಬಿಕೆಗಳಿಂದ ಮುಕ್ತ ಗೊಳಿಸುವ ಸಲುವಾಗಿ ಯಾದರೂ ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ನಿಷೇಧ ಕಾನೂನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು. ‘ಕರಡಿನಲ್ಲಿ ಸೇರ್ಪಡೆಯಾಗದೇ ಇರುವ ವಿಚಾರಗಳನ್ನು ಕೂಡ ಅನಗತ್ಯವಾಗಿ ಚರ್ಚೆ ಮಾಡಿ, ಜನರ ದಿಕ್ಕುತಪ್ಪಿಸಲಾಗುತ್ತಿದೆ. ಪ್ರಶ್ನೆ ಕೇಳುವು ದನ್ನು  ಹಿಂದೂಧರ್ಮ ಇಷ್ಟಪಡುವು ದಿಲ್ಲ ಬದಲಿಗೆ ಹರಕೆಯ ಕುರಿಗಳಂತೆ ಇರಬೇಕೆಂದು ಬಯಸುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಕೇವಲ ಹಿಂದೂಧರ್ಮದಲ್ಲಿರುವ ಮೂಢನಂಬಿಕೆಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದು ಹುಯಿಲೆಬ್ಬಿಸಲಾಗುತ್ತಿದೆ. ಆದರೆ, ಟೀಕೆ ಮಾಡುವ ಮುನ್ನ ಕರಡು ಪ್ರತಿಯನ್ನು ಸಮರ್ಪಕವಾಗಿ ಓದಬೇಕು’ ಎಂದು ಸಲಹೆ ನೀಡಿದರು. ಸಮಿತಿಯ ಸದಸ್ಯೆ ಇಂದಿರಾ ಕೃಷ್ಣಪ್ಪ, ಸಂಚಾಲಕ ಮಾವಳ್ಳಿ ಶಂಕರ್ ಉಪಸ್ಥಿತರಿದ್ದರು.

‘ಧರ್ಮದ ಹೆಸರು ನಮೂದಿಸಿಲ್ಲ’
‘ಮೂಢನಂಬಿಕೆ ಪ್ರತಿಬಂಧಕ ನಿಷೇಧ ಕಾಯ್ದೆಯ ಕರಡಿನಲ್ಲಿ ಯಾವುದೇ ಧರ್ಮದ ಹೆಸರನ್ನು ನಮೂದಿಸಿಲ್ಲ. ಬದಲಿಗೆ  ನಂಬಿಕೆಯ ಹೆಸರಿನಲ್ಲಿ ನಡೆಯುವ ಅನ್ಯಾಯದ  ಬಗ್ಗೆ ಮಾತ್ರ  ಚಕಾರ ಎತ್ತಲಾಗಿದೆ’ ಎಂದು ರಾಷ್ಟ್ರೀಯ ಕಾನೂನು ಶಾಲೆಯ ಸಹ ಪ್ರಾಧ್ಯಾಪಕರೂ ಆದ ಕರಡು ಸಮಿತಿಯ ಸದಸ್ಯರಲ್ಲೊಬ್ಬರಾದ  ಡಾ.ಎಸ್.ಜಾಫೆಟ್ ಸ್ಪಷ್ಟಪಡಿಸಿದರು.

‘ವೈಯಕ್ತಿಕ ನೆಲೆಯಲ್ಲಿರುವ ಯಾವುದೇ ಮೂಢನಂಬಿಕೆಗಳ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಆದರೆ, ಪ್ರಸ್ತುತ ಗಂಡ–ಹೆಂಡತಿ ಜಗಳ, ಶಿಕ್ಷಕರ ಶಿಕ್ಷೆ ಯಾವುದೂ ಕೂಡ ವೈಯಕ್ತಿಕ ವಿಚಾರವಾಗಿ ಉಳಿದಿಲ್ಲ. ಬದಲಿಗೆ ಕೌಟುಂಬಿಕ ದೌರ್ಜನ್ಯ, ಮಕ್ಕಳ ಹಕ್ಕು ಕಾಯ್ದೆಯ ಚೌಕಟ್ಟಿನಲ್ಲಿ ಬರುತ್ತದೆ’ ಎಂದು ಪ್ರತಿಪಾದಿಸಿದರು.

‘ಕರಡನ್ನು  ಕೇವಲ ಕಾನೂನಿನ ದಾಖಲೆಯಾಗಿ ರಚಿಸದೇ,  ಸಾಮಾಜಿಕ ನೀತಿಯನ್ನಾಗಿ ರೂಪಿಸಿದ್ದೇವೆ.  ಸುಮಾರು 250ಕ್ಕೂ ಹೆಚ್ಚು ಮಂದಿ ವಿವಿಧ ಕ್ಷೇತ್ರದ ತಜ್ಞರ ಜತೆ ಚರ್ಚೆ ನಡೆಸಲಾಗಿದ್ದು, ಅವರ ಅಭಿಪ್ರಾಯವನ್ನು ಪರಿಗಣಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT