ADVERTISEMENT

ವೈದ್ಯಕೀಯ ಸೌಕರ್ಯ ವಿನಿಮಯ: ಪನೇಷಿಯ-ಮಣಿಪಾಲ್ ಆಸ್ಪತ್ರೆಗಳ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ಬೆಂಗಳೂರು: ತಜ್ಞ ವೈದ್ಯರ ಸೇವೆ ಮತ್ತು ವೈದ್ಯಕೀಯ ತಾಂತ್ರಿಕ ಸೌಕರ್ಯಗಳನ್ನು ಪರಸ್ಪರ ಬಳಸಿಕೊಳ್ಳಲು ನಗರದ ಪನೇಷಿಯ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.

ಬಸವೇಶ್ವರನಗರದ ಪನೇಷಿಯ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ದೀಪ ಬೆಳಗಿಸಿದ ಉಭಯ ಆಸ್ಪತ್ರೆಗಳ ಮುಖ್ಯಸ್ಥರು ಒಪ್ಪಂದವು ಈ ಕ್ಷಣದಿಂದಲೇ ಜಾರಿಯಾಗಿದೆ ಎಂದು ಘೋಷಿಸಿದರು.

ಪನೇಷಿಯ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಜಯಣ್ಣ, ವೈದ್ಯಕೀಯ ನಿರ್ದೇಶಕ ರಾಜೆನ್ ಪಡುಕೋಣೆ, ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ.ನಾಗೇಂದ್ರಸ್ವಾಮಿ, ವೈದ್ಯಕೀಯ ನಿರ್ದೇಶಕ ಡಾ.ಎಚ್.ಸುದರ್ಶನ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ಜಯಣ್ಣ ಮಾತನಾಡಿ, ‘ರೋಗಿಗಳಿಗೆ ತಾವಿರುವ ಸ್ಥಳದಲ್ಲೇ ಗುಣಮಟ್ಟದ ಮತ್ತು ವಿಶೇಷ ವೈದ್ಯಕೀಯ ಸೇವೆಯನ್ನು ದೊರಕಿಸಿಕೊಡುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದಿಂದ ನಗರದ ಪಶ್ಚಿಮ ಭಾಗದ ನಾಗರಿಕರಿಗೆ ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯ ದೊರಕಲಿದೆ’ ಎಂದರು.

‘ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ಲಭ್ಯವಿರುವ ಹೃದ್ರೋಗ, ನರರೋಗ, ಆರ್ಥೋಪಿಡಿಕ್ಸ್, ನವಜಾತ ಶಿಶು ಆರೈಕೆ, ಕ್ಯಾನ್ಸರ್, ಎಚ್‌ಸಿಟಿ ಮತ್ತಿತರ ವಿಭಾಗಗಳಿಗೆ ಮಣಿಪಾಲ್ ಆಸ್ಪತ್ರೆಯ ಅನುಭವಿ, ನಿಪುಣ ತಜ್ಞರ ಬೆಂಬಲ ಸಿಗಲಿದೆ. ಇದರಿಂದ ಪನೇಷಿಯ ಆಸ್ಪತ್ರೆಯ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಿದೆ’ ಎಂದು ಅವರು ಹೇಳಿದರು.

ನಾಗೇಂದ್ರಸ್ವಾಮಿ ಮಾತನಾಡಿ, ‘ಇದು ಪನೇಷಿಯಾಗೆ ಮಾತ್ರವಲ್ಲ; ಮಣಿಪಾಲ್ ಆಸ್ಪತ್ರೆಗೂ ಐತಿಹಾಸಿಕ ದಿನವಾಗಿದೆ. ಎರಡೂ ಆಸ್ಪತ್ರೆಗಳಿಗೆ ರೋಗಿಯ ಹಿತವೇ ಮುಖ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.