ADVERTISEMENT

ವೈದ್ಯನ ಸೋಗಿನಲ್ಲಿ ಚಿನ್ನಾಭರಣ ಕದ್ದೊಯ್ದ

​ಪ್ರಜಾವಾಣಿ ವಾರ್ತೆ
Published 29 ಮೇ 2018, 20:03 IST
Last Updated 29 ಮೇ 2018, 20:03 IST

ಬೆಂಗಳೂರು: ಸ್ಯಾಂಕಿ ರಸ್ತೆಯ ‘ಲೀ ಮೆರಿಡಿಯನ್’ ಹೋಟೆಲ್‌ನಲ್ಲಿ ನಡೆದ ಸಮ್ಮೇಳನಕ್ಕೆ ವೈದ್ಯನ ಸೋಗಿನಲ್ಲಿ ಹೋಗಿದ್ದ ಕಳ್ಳನೊಬ್ಬ, ವೈದ್ಯೆಯೊಬ್ಬರ ಚಿನ್ನಾಭರಣವಿದ್ದ ಬ್ಯಾಗ್‌ ಕದ್ದೊಯ್ದಿದ್ದಾನೆ.

ಘಟನೆ ಸಂಬಂಧ ಮುಂಬೈನ ವೈದ್ಯೆ ಡಾ. ಮಂಜೀತ ಮೆಹ್ತಾ ಅವರು ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ಕೃತ್ಯವು ಹೋಟೆಲ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

‘ಹೋಟೆಲ್‌ನ ಸಭಾಭವನದಲ್ಲಿ ಮೇ 24ರಂದು ‘ಬಯೋಮೇಕರ್ಸ್ ಅಧ್ಯಯನ’ ಸಂಬಂಧ ಸಮ್ಮೇಳನ ಆಯೋಜಿಸಲಾಗಿತ್ತು. ಡಾ. ಮಂಜೀತ ಸೇರಿ 25ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ಎಲ್ಲ ವೈದ್ಯರಿಗೂ ಗುರುತಿನ ಚೀಟಿಗಳನ್ನು ನೀಡಲಾಗಿತ್ತು. ಅದನ್ನು ನೋಡಿಯೇ ಭದ್ರತಾ ಸಿಬ್ಬಂದಿ, ವೈದ್ಯರನ್ನು ಒಳಗೆ ಬಿಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಗುರುತಿನ ಚೀಟಿ ಧರಿಸಿಕೊಂಡೇ ಒಳಗೆ ಹೋಗಿದ್ದ ಕಳ್ಳ, ಮಂಜೀತ ಅವರ ಹಿಂಬದಿಯ ಆಸನದಲ್ಲೇ ಕುಳಿತಿದ್ದ. ತಜ್ಞರು ಉಪನ್ಯಾಸ ನೀಡುತ್ತಿದ್ದ ವೇಳೆ ಎಲ್ಲ ವೈದ್ಯರ ಲಕ್ಷ್ಯ ಅವರತ್ತಲೇ ಇತ್ತು. ಅದೇ ವೇಳೆ ಮಂಜೀತ ಅವರ ಬ್ಯಾಗ್‌ ಕದ್ದುಕೊಂಡು ಸ್ಥಳದಿಂದ ಆರೋಪಿ ಹೊರಟು ಹೋಗಿದ್ದಾನೆ’ ಎಂದರು.

‘₹3 ಲಕ್ಷ ಮೌಲ್ಯದ ಚಿನ್ನದ ಉಂಗುರ, ಬಳೆ, ನೆಕ್ಲೇಸ್ ಹಾಗೂ ಸರವನ್ನು ಬ್ಯಾಗ್‌ನಲ್ಲಿಟ್ಟಿದ್ದೆ. ಅದನ್ನು ನೆಲದ ಮೇಲಿಟ್ಟು, ಉಪನ್ಯಾಸ ಆಲಿಸುತ್ತಿದ್ದೆ. ಅದೇ ವೇಳೆಯಲ್ಲೇ ನನ್ನ ಬ್ಯಾಗ್‌ ಕದಿಯಲಾಗಿದೆ. ಉಪನ್ಯಾಸ ಮುಗಿದ ಬಳಿಕವೇ ಅದು ನನ್ನ ಗಮನಕ್ಕೆ ಬಂತು. ನಂತರ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಿದೆ. ನನ್ನ ಹಿಂದೆ ಕುಳಿತಿದ್ದ ವ್ಯಕ್ತಿಯೇ ಚಿನ್ನಾಭರಣ ಕದ್ದುಕೊಂಡು ಹೋಗಿದ್ದು ಗೊತ್ತಾಯಿತು’ ಎಂದು ಮಂಜೀತ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದರು.

’ಹೋಟೆಲ್ ಹೊರಗಡೆ ಸಾಕಷ್ಟು ಭದ್ರತೆ ಇದೆ. ಮೊದಲ ಬಾರಿಗೆ ಹೋಟೆಲ್‌ನಲ್ಲಿ ಇಂಥ ಘಟನೆ ನಡೆದಿದೆ. ಆರೋಪಿಯ ಮುಖಚಹರೆ ಸ್ಪಷ್ಟವಾಗಿದ್ದು, ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.