ADVERTISEMENT

ವ್ಯಾಪಾರಿ ಸಂಘದಿಂದ ನೂತನ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಬೆಂಗಳೂರು:  ಬೆಂಗಳೂರು ವ್ಯಾಪಾರಿಗಳ ಸಂಘವು ಹೊಸ ವರ್ಷದ ಅಂಗವಾಗಿ ಮಹಾತ್ಮ ಗಾಂಧಿ ರಸ್ತೆಗೆ ಹೆಚ್ಚು ಉಪಯುಕ್ತವಾದಂತಹ ತಾತ್ಕಾಲಿಕ ಉಡುಗೊರೆ ನೀಡಿದೆ. ಬೆಂಗಳೂರು ವ್ಯಾಪಾರಿಗಳ ಸಂಘವು 10 ಕಸದ ಬುಟ್ಟಿಗಳನ್ನು ಮಹಾತ್ಮಗಾಂಧಿ ರಸ್ತೆಯುದ್ದಕ್ಕೂ ಇಟ್ಟಿದೆ.
 

ಬಿಬಿಎಂಪಿಯು ಬೆಂಗಳೂರು ನಗರವನ್ನು `ಕಸದ ಬುಟ್ಟಿ ಮುಕ್ತ ನಗರ~ ವೆಂದು ಘೋಷಿಸಿರುವುದರಿಂದ ಇವೆಲ್ಲ ಹೊಸ ವರ್ಷ ಆಚರಣೆ ಮುಗಿಯುವವರೆಗೂ ಮಾತ್ರ ಇರುತ್ತವೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ಮಹಾತ್ಮ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಈ ಕಸದ ಬುಟ್ಟಿಗಳು ಕಾಯಂ ಆಗಿ ಇರುತ್ತವೆ ಎಂದು ಬೆಂಗಳೂರು ವ್ಯಾಪಾರಿಗಳ ಸಂಘವು ಹೇಳಿದೆ.

ಬೆಂಗಳೂರು ವ್ಯಾಪಾರಿಗಳ ಸಂಘದ ಅಧ್ಯಕ್ಷ ಭೂಪಾಲಂ ಪಿ. ಶ್ರೀನಾಥ್, `ಈ ಹಿಂದೆ ನಾವು ಅಳವಡಿಸಿದ್ದ ಕಸದ ಬುಟ್ಟಿಗಳು `ನಮ್ಮ ಮೆಟ್ರೊ~ ಕೆಲಸ ನಡೆದಾಗ ಹಾಳಾಗಿವೆ. ಹೊಸ ವರ್ಷದಲ್ಲಿ ನಗರದ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕಾಗಿ ಇದೀಗ ಅಳವಡಿಸಿರುವ ಕಸದ ಬುಟ್ಟಿಗಳು ಸಾರ್ವಜನಿಕರಿಗೆ ಸಹಕಾರಿಯಾಗಲಿವೆ~ ಎಂದು ಪ್ರತಿಕ್ರಿಯಿಸಿದರು.
 
ಕಸದ ಬುಟ್ಟಿಗಳು ತುಂಬಿದಾಗ ಬೆಳಿಗ್ಗೆ ಪಾಲಿಕೆಯ ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡಲು ಹೆಚ್ಚು ಅನುಕೂಲಕರವಾಗಿವೆ. ಆದರೆ, ಇವು ತಾತ್ಕಾಲಿಕವಾಗಿರುವುದರಿಂದ ಎಷ್ಟು ದಿನ ವ್ಯಾಪಾರಿಗಳಿಗೆ ಅನುಕೂಲವಾದೀತು ಎಂಬುದು ಹಲವರ ಪ್ರಶ್ನೆ. 

ಮಹಾತ್ಮ ಗಾಂಧಿ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮಾತ್ರ ಕಸ ಸಂಗ್ರಹಣೆಗೆ ಈ ಕಸದ ಬುಟ್ಟಿಗಳನ್ನಿಡಲು ಅನುಮತಿ ನೀಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ತೆಗೆಯಲಾಗುವುದು. ಕಸದ ಬುಟ್ಟಿಗಳು ಶಾಶ್ವತವಾಗಿ ಇರುವುದಿಲ್ಲ ಎಂದು ಬಿಬಿಎಂಪಿಯ   ವಕ್ತಾರರೊಬ್ಬರು  ಪ್ರತಿಕ್ರಿಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT